ಚಿತ್ರದುರ್ಗ: ಬೆಸ್ಕಾಂ ಜಾಗೃದಳದ ಅಧಿಕಾರಿ, ಸಿಬ್ಬಂದಿ ಮೀಟರ್ ತಪಾಸಣೆಗೆಂದು ಗ್ರಾಮಕ್ಕೆ ಬಂದಿದ್ದ ವೇಳೆ ಖಾಲಿ ಪೇಪರ್‌ಗೆ ಸಹಿ ಹಾಕಿಸಿಕೊಂಡಿದ್ದಾರೆಂದು ಆರೋಪಿಸಿ ನಗರದ ಬೆಸ್ಕಾಂ ಜಾಗೃತ ದಳದ ಪೊಲೀಸ್ ಠಾಣೆಗೆ ಬುಧವಾರ ಮುತ್ತಿಗೆ ಹಾಕಿ ರೈತರು ಪ್ರತಿಭಟಿಸಿದರು.
ತಾಲೂಕಿನ ಚಿಕ್ಕಕಬ್ಬಿಗೆರೆಗೆ ಮಂಗಳವಾರ ಆಗಮಿಸಿದ್ದ ಸಿಬ್ಬಂದಿ ಐದಾರು ಸಹಿ ಹಾಕಿಸಿಕೊಂದ್ದಾರೆ, ಜತೆಗೆ ಬೂಟುಗಾಲಲ್ಲಿ ಮನೆ ಪ್ರವೇಶಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಠಾಣೆ ಎದುರು ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದರು.
ಆದರೆ, ಮೆರವಣಿಗೆಗೆ ಅನುಮತಿ ನಿರಾಕರಿಸಿದ ಪೊಲೀಸರ ವಿರುದ್ಧ ವಾಗ್ವಾದ ನಡೆಸಿದ ರೈತರು, ಪ್ರತಿಭಟನಾ ಮೆರವಣಿಗೆ ನಡೆಸಿಯೇ ಸಿದ್ದ ಎಂದು ಪಟ್ಟು ಹಿಡಿದರು. ಹಿರಿಯ ಅಧಿಕಾರಿಗಳು ಮನವೊಲಿಸಿದ ಬಳಿಕ ವಾಹನಗಳಲ್ಲಿ ತೆರಳಿದ ರೈತರು ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಸಿದ್ದವೀರಪ್ಪ, ಚಿಕ್ಕಕಬ್ಬಿಗೆರೆಯಲ್ಲಿ ಹತ್ತಾರು ವರ್ಷಗಳಿಂದ ಮೀಟರ್ ಇಲ್ಲ. 2003 ಫೆ.12ರಂದು ಜಿಲ್ಲೆಯಲ್ಲಿ ವಿದ್ಯುತ್ ಕಂಪನಿಗಳ ಅವೈಜ್ಞಾನಿಕ ನೀತಿ ಖಂಡಿಸಿ ನಡೆದಿದ್ದ ಚಳವಳಿ ವೇಳೆ ಡಿಸಿ ಸಮ್ಮುಖದಲ್ಲೇ ನಿಗಮಕ್ಕೆ ಮೀಟರ್‌ಗಳನ್ನು ವಾಪಾಸು ಮಾಡಲಾಗಿದೆ ಎಂದರು.
ಆದರೆ, ಈಗ ಮೀಟರ್ ಇಲ್ಲದಿದ್ದರೆ ಹೊಸದನ್ನು ಹಾಕಿಸುವುದಾಗಿ ಹೇಳಿ 50ಕ್ಕೂ ಹೆಚ್ಚು ರೈತರಿಂದ ಸಹಿ ಹಾಕಿಸಿಕೊಂಡು ಬಂದಿದ್ದಾರೆ. ರೈತರನ್ನು ಕರೆಂಟ್ ಕಳ್ಳರು ಎನ್ನುವುದು ಸರಿಯಲ್ಲ. ದೌರ್ಜನ್ಯದಿಂದ ಸಹಿ ಹಾಕಿಸಿಕೊಂಡ ಪೇಪರ್‌ಗಳನ್ನು ಹಿಂದಕ್ಕೆ ಕೊಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.
ಜಾಗೃದಳದಿಂದ ಕಾನೂನು ದುರ್ಬಳಕೆ ಆಗುತ್ತಿದೆ. ನಿಮ್ಮ ಅಧಿಕಾರಿಗಳು ಭ್ರಷ್ಟಾಚಾರ ಮಾಡುತ್ತಿದ್ದಾರೆ. ನಮ್ಮೊಂದಿಗೆ ಬಂದು ತಪಾಸಣೆ ನಡೆಸಿ, ಎಲ್ಲೆಲ್ಲಿ ವಿದ್ಯುತ್ ಕಳವು ಆಗುತ್ತಿದೆ ಎಂದು ತೋರಿಸುತ್ತೇವೆ ಎಂದು ಹೇಳಿದರು.
ಮುಖಂಡರಾದ ರೆಡ್ಡಿಹಳ್ಳಿ ವೀರಣ್ಣ, ಎನ್.ಕೆ.ರಾಜಶೇಖರಪ್ಪ, ಬಿರಾವರ ಬಸವರಾಜ್, ಹರೀಶ್, ಬಸವರಾಜ್, ಪ್ರಕಾಶ್ ಮತ್ತಿತರರು ಇದ್ದರು. ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಪ್ರಕಾಶ್ ಹಾಗೂ ನಯೀಂ ಅಹಮ್ಮದ್ ಬಂದೋಬಸ್ತ್ ಉಸ್ತುವಾರಿ ವಹಿಸಿದ್ದರು.
ಕ್ಷಮೆಯಾಚಿಸಿವೇ ಎಂದ ಜಾಗೃದಳದ ಸಿಪಿಐ: ತಪ್ಪಾಗಿದ್ದರೆ ಕ್ಷಮೆಯಾಚಿಸುವೆ. ಆದರೆ, ಯಾರಿಂದಲೂ ಬಿಳಿ ಹಾಳೆ ಮೇಲೆ ಸಹಿ ಹಾಕಿಸಿಕೊಂಡಿಲ್ಲ, ಅದು ಪಂಚನಾಮೆ ಸಹಿ, ಯಾರ ಮೇಲೂ ಕೇಸ್ ಹಾಕಲ್ಲವೆಂದು ಜಾಗೃತದಳದ ಸಿಪಿಐ ಬಿ.ಕೆ.ಲತಾ ಸ್ಪಷ್ಟಪಡಿಸಿದರು. ಜಾಗೃತದಳದ ಎಇಇ ರಶೀದ ಶಬನಾ ಮಾತನಾಡಿ, ಬೂಟುಗಾಲಲ್ಲಿ ಯಾರ ಮನೆಯೊಳಗೂ ಹೋಗಿಲ್ಲ. ವಿಡಿಯೋ ರೆಕಾರ್ಡ್ ಕೊಡುತ್ತೇನೆಂದು ವಾದಿಸಿದರು. ಇದರಿಂದ ಸಿಟ್ಟಿಗೆದ್ದ ರೈತರು ಈ ರೀತಿ ಸಮರ್ಥನೆ ಸರಿಯಲ್ಲ ಎಂದು ತಿಳಿಸಿದರು.