ಮೈಸೂರು: ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡುವ ಸಲುವಾಗಿ ಪ್ರಥಮ ಬಾರಿಗೆ ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಂಡಿರುವ ‘ಮೈಸೂರು ಫೆಸ್ಟ್-2024’ಕ್ಕೆ ಶುಕ್ರವಾರ ನಗರದ ಮಾನಸಗಂಗೋತ್ರಿಯಲ್ಲಿ ವರ್ಣರಂಜಿತ ಚಾಲನೆ ದೊರೆಯಿತು. ಮೊದಲ ದಿನ ‘ಚಿತ್ರಸಂತೆ’ ಸಾಂಸ್ಕೃತಿಕ ನಗರಿಯ ಜನರನ್ನು ಆಕರ್ಷಿಸಿತು.
ನಾಡಿನ ವಿವಿಧೆಡೆಯಿಂದ ಆಗಮಿಸಿದ ಖ್ಯಾತ ಕಲಾವಿದರು ತಾವು ರಚಿಸಿದ ಕಲಾಕೃತಿಗಳನ್ನು ಮಾನಸಗಂಗೋತ್ರಿಯ ಕ್ಲಾಕ್‌ಟವರ್ ರಸ್ತೆಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದರು. ಸಾಕಷ್ಟು ಜನರು ಚಿತ್ರಗಳನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರೆ ಉಳಿದವರು ಚಿತ್ರಗಳನ್ನು ಖರೀದಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡಿದರು. ಕೆಲವು ಕಲಾವಿದರು ಜನರ ಚಿತ್ರಗಳನ್ನು ಸ್ಥಳದಲ್ಲಿಯೇ ಬಿಡಿಸಿ ನೀಡುತ್ತಿದ್ದರು. ಕಲಾವಿದ ರೊಬ್ಬರು ಜನರ ವ್ಯಂಗ್ಯಚಿತ್ರಗಳನ್ನು ಸ್ಥಳದಲ್ಲಿಯೇ ಬಿಡಿಸಿ ಗಮನ ಸೆಳೆದರು.
ಚಿತ್ರಸಂತೆಯಿಂದ ಗಂಗೋತ್ರಿ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಒಟ್ಟು 120 ಕಲಾವಿದರು ನಾಡಿನ ವಿವಿಧೆಡೆಯಿಂದ ಆಗಮಿಸಿದ್ದರು. ಗ್ರಾಮೀಣ ಮತ್ತು ನಗರ ಜನಜೀವನ, ಕಲೆ, ವಾಸ್ತುಶಿಲ್ಪ, ಪ್ರಕೃತಿ ಸೇರಿದಂತೆ ವಿವಿಧ ವಿಷಯಗಳಡಿ ರಚಿಸಿದ ಚಿತ್ರಗಳು ಗಮನ ಸೆಳೆಯಿತು. ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಂಡ ಬಾಲರಾಮನ ಮೂರ್ತಿಯ ಚಿತ್ರ ಎಲ್ಲರನ್ನು ಆಕರ್ಷಿಸಿತು. ಚಿತ್ರಸಂತೆಯಲ್ಲಿ ಮಣ್ಣಿನಿಂದ ತಯಾರಿಸಿದ ಗಣಪತಿ, ಆನೆ, ಕುದುರೆ ಸೇರಿದಂತೆ ವಿವಿಧ ಕಲಾಕೃತಿಗಳು, ಮಣ್ಣಿನ ಆಭರಣಗಳು, ಮಣ್ಣಿನ ಮಡಿಕೆ, ಕುಡಿಕೆಗಳು ಜನರ ಕಣ್ಮನ ಸೆಳೆಯಿತು.
ಉತ್ತಮ ಸ್ಪಂದನೆ: ಚಿತ್ರಸಂತೆಗೆ ಸಾಂಸ್ಕೃತಿಕ ನಗರಿಯ ಜನರಿಂದ ಉತ್ತಮ ಸ್ಪಂದನೆ ದೊರೆಯಿತು. ಬೆಳಗ್ಗಿನಿಂದ ಸಂಜೆವರೆಗೆ ಗಂಗೋತ್ರಿ ಆವರಣದಲ್ಲಿ ಜನಜಾತ್ರೆಯೇ ನೆರೆದಿತ್ತು. ಸಾಕಷ್ಟು ಜನರು ಚಿತ್ರಗಳ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯಗಳು ಕಂಡುಬಂತು. ಚಿತ್ರಸಂತೆಯಲ್ಲಿ ಮಣ್ಣಿನ ಕಲಾಕೃತಿಗಳನ್ನು ತಯಾರಿಸುವ ತರಬೇತಿಯನ್ನು ಸಹ ನೀಡಲಾಗುತಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳು ಮಣ್ಣಿನ ಕಲಾಕೃತಿಗಳನ್ನು ರಚಿಸಿ ಸಂಭ್ರಮಿಸಿದರು. ಟ್ಯಾಟು ಕಲಾವಿದರು ಸಹ ಚಿತ್ರಸಂತೆಯಲ್ಲಿ ಪಾಲ್ಗೊಂಡು ವೈವಿಧ್ಯಮಯ ಟ್ಯಾಟುಗಳನ್ನು ಹಾಕುವ ಮೂಲಕ ಗಮನ ಸೆಳೆದರು.
ಚಿತ್ರಸಂತೆಗೆ ಚಾಲನೆ: ಚಿತ್ರಸಂತೆಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ನಮ್ಮ ಸಂಸ್ಕೃತಿ ಕಲೆ, ಸಂಪ್ರದಾಯದ, ಧಾರ್ಮಿಕತೆಯ ಬಗ್ಗೆ ಹೊರಗಿನ ಜನರಿಗೆ ತಿಳಿಸಿ ಅದು ಎಲ್ಲೆಡೆಯು ಚರ್ಚೆಯಾಗುವಂತೆ ಮಾಡಬೇಕು. ಪ್ರಥಮ ಬಾರಿಗೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಮೈಸೂರು ಫೆಸ್ಟ್ ಹಮ್ಮಿಕೊಳ್ಳಲಾಗಿದೆ. ಈ ಮೈಸೂರು ಫೆಸ್ಟ್‌ಅನ್ನು ಪ್ರತಿವರ್ಷ ಹಮ್ಮಿಕೊಳ್ಳಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಚಿತ್ರಸಂತೆಯನ್ನು ಆಗಿಂದಾಗೆ ಏರ್ಪಡಿಸಬೇಕು. ಚಿತ್ರಸಂತೆಯ ಮೂಲಕ ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ಕಾರ್ಯ ಆಗಬೇಕು.ನಗರ, ಪಟ್ಟಣಗಳಲ್ಲಿ ಚಿತ್ರಸಂತೆ ಮೂಲಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಕಾರ್ಯ ಆಗಬೇಕು. ಇದರಿಂದ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತದೆ ಎಂದರು.
ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಮಾತನಾಡಿ, ಮೈಸೂರು ದಸರಾ ಸಂದರ್ಭದಲ್ಲಿ ಈ ಕಾರ್ಯಕ್ರಮ ನಡೆಯಬೇಕಿತ್ತು. ಕಾರಣಾಂತರಗಳಿಂದ ನಡೆಸಲು ಸಾಧ್ಯವಾಗಲಿಲ್ಲ. ಈ ಉತ್ಸವವು ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಕಲಾವಿದರಿಗೆ ಮಾರುಕಟ್ಟೆಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಯುವಜನರಿಗೆ ನಮ್ಮ ಕಲೆಯ ಹಾಗೂ ಸಂಸ್ಕೃತಿಯ ಬಗ್ಗೆ ತಿಳಿಸಿಕೊಡಲು ಮೈಸೂರು ಫೆಸ್ಟ್ ಒಂದು ಸೇತುವೆಯಾಗಿದೆ ಎಂದರು.
ದಸರಾ ಸಂದರ್ಭದಲ್ಲಿ ಪ್ರವಾಸಿ ಚಟುವಟಿಕೆಗಳಿಗಾಗಿ ಬಿಡುಗಡೆಯಾಗಿದ್ದ ಹಣವನ್ನು ಈ ಉತ್ಸವಕ್ಕೆ ಬಳಸಿಕೊಂಡು ಚಿತ್ರಸಂತೆ, ಸ್ಥಳೀಯ ಕಲೆಗಳ ಪ್ರದರ್ಶನ, ಆಹಾರಮೇಳ ಹಾಗೂ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮಗಳು ನಡೆಸಲಾಗುತ್ತಿದೆ. ಮೈಸೂರು ಫೆಸ್ಟ್‌ನಿಂದ ಮೈಸೂರು ದಸರಾ ಸಂಭ್ರಮಮಾರುಕಳಿಸುತ್ತಿದೆ ಎಂದರೆ ತಪ್ಪಾಗಲಾರದು.
ವೇದಿಕೆಯಲ್ಲಿ ಶಾಸಕ ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯ ಮರೀತೀಬ್ಬೆಗೌಡ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಎಂ ಗಾಯಿತ್ರಿ, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಕೆ.ಎಂ. ಸವಿತಾ, ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್ ಹಾಗೂ ಇತರರು ಇದ್ದರು.