ಕೋಲಾರ: ತಾಲೂಕಿನ ವೆಂಕಟಾಪುರ ಗ್ರಾಮದ ಹೊರವಲಯದಲ್ಲಿ ಕಾಡು ಹಂದಿ ಬೇಟೆಗಾಗಿ ಹಾಕಿದ್ದ ಉರುಳಿಗೆ ಸಿಲುಕಿ ನರಳಾಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಶತಶೃಂಗ ಪರ್ವತ ಶ್ರೇಣಿ ವ್ಯಾಪ್ತಿಯ ಬೆಟ್ಟಗುಡ್ಡಗಳಲ್ಲಿ ಕಾಡುಹಂದಿಗಳು ಯಥೇಚ್ಛವಾಗಿದ್ದು, ಬೆಟ್ಟದ ತಪ್ಪಲಿನಲ್ಲಿರುವ ಜಮೀನಿನಲ್ಲಿ ಬೆಳೆ ತಿಂದು ಹಾಕುತ್ತಿವೆ. ಕೆಲ ಬೇಟೆಗಾರರು ಕಾಡು ಹಂದಿ ಬೇಟೆಯಾಡುತ್ತಿದ್ದು, ವೆಂಕಟಾಪುರ ಗ್ರಾಮದ ಹೊರವಲಯದಲ್ಲಿ ಉರುಳು ಹಾಕಿದ್ದರು. ಭಾನುವಾರ ರಾತ್ರಿ ಬೆಟ್ಟದಿಂದ ಊರಿನ ಕಡೆ ಬಂದಿದ್ದ ಚಿರತೆಯೊಂದು ಉರುಳಿಗೆ ಸಿಲುಕಿಕೊಂಡಿದೆ.
ಕತ್ತು ಹಾಗೂ ಕಾಲಿಗೆ ತಂತಿ ಉರುಳು ಬಿಗಿಯಾಗಿದ್ದರಿಂದ ರಾತ್ರಿಯಿಂದ ಬೆಳಗ್ಗೆವರೆಗೆ ಚೀರಾಡುತ್ತಿತ್ತು. ಗ್ರಾಮಸ್ಥರು ನೀಡಿದ ಮಾಹಿತಿಯನ್ವಯ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಧಾವಿಸಿದರಾದರೂ ಅರಿವಳಿಕೆ ತಜ್ಞರು ಇಲ್ಲದಿದ್ದುದರಿಂದ ಬನ್ನೇರುಘಟ್ಟ ಜೈವಿಕ ಉದ್ಯಾನದ ತಜ್ಞರ ಮೊರೆ ಹೋಗಬೇಕಾಯಿತು.
ಸ್ಥಳಕ್ಕೆ ಬಂದ ಪರಿಣಿತ ತಜ್ಞರು ಚಿರತೆಗೆ ಮೂರು ಸಲ ಅರಿವಳಿಕೆ ಮದ್ದು ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸಿ ಬಲೆಯಲ್ಲಿ ಹಿಡಿದು ಬೋನಿಗೆ ರವಾನಿಸಿದರು.
ಲಘು ಲಾಠಿ ಪ್ರಹಾರ: ಉರುಳಿಗೆ ಚಿರತೆ ಸಿಕ್ಕಿರುವ ಸುದ್ದಿ ತಿಳಿದು ಗ್ರಾಮದ ನೂರಾರು ಮಂದಿ ತಂಡೋಪತಂಡವಾಗಿ ಜಮಾಯಿಸಿದ್ದರು. ಬೋನಿನಲ್ಲಿ ಬಂಧಿಯಾದ ಸುಮಾರು 3 ವರ್ಷದ ಹೆಣ್ಣು ಚಿರತೆಯನ್ನು ಟ್ರ್ಯಾಕ್ಟರ್ ಏರಿಸುತ್ತಿದ್ದಾಗ ನೂರಾರು ಜನ ಒಮ್ಮೆಲೇ ನೋಡಲು ಮುಗಿ ಬಿದ್ದರು. ಪರಿಸ್ಥಿತಿ ನಿಯಂತ್ರಿಸಲು ಗ್ರಾಮಾಂತರ ಠಾಣೆ ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸಿದರು.