ಅರಮೇರಿ ಕಳಂಚೇರಿ ಶ್ರೀಮಠದ ಲಿಂಗರಾಜೇಂದ್ರ ಭವನದ ಸಭಾಂಗಣದಲ್ಲಿ ಮಾಸಿಕ ತತ್ವ ಚಿಂತನಾಗೋಷ್ಠಿ ಕಾರ್ಯಕ್ರಮ ನಡೆಯಿತು. ಎಸ್.ವಿ.ನರಸಿಂಹನ್, ಡಾ.ಮೋಟಯ್ಯ, ಮಂಜುನಾಥ್, ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಇದ್ದರು. 
ಜಿಲ್ಲೆ

ಧ್ಯಾನದಿಂದ ಸಮಾಧಾನ, ಆತ್ಮಶಕ್ತಿ

ನಾಗೇಶ ಎಸ್

ವಿರಾಜಪೇಟೆ: ಮನುಷ್ಯ ಆರೋಗ್ಯವಂತನಾಗಲು ದೇಹವೇ ದೇಗುಲವೆಂದು ಅರಿತು ಧ್ಯಾನ ಮಾಡಬೇಕು. ಧ್ಯಾನದಿಂದ ಸಮಾಧಾನ, ಆತ್ಮಶಕ್ತಿ ದೊರಕುತ್ತದೆ ಎಂದು ಬೆಂಗಳೂರಿನ ಸಮುದಾಯ ದಂತ ವೈದ್ಯ ಡಾ.ಶಿವಕುಮಾರ್ ಹೇಳಿದರು.

ಸಮೀಪದ ಅರಮೇರಿ ಕಳಂಚೇರಿ ಶ್ರೀ ಮಠದ ಲಿಂಗರಾಜೇಂದ್ರ ಭವನದ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಾಸಿಕ ತತ್ವ ಚಿಂತನಾಗೋಷ್ಟಿ ಹೊಂಬೆಳಕು ಕಿರಣ ಕಾರ್ಯಕ್ರಮದಲ್ಲಿ ಆರೋಗ್ಯವೇ ಸಂಪತ್ತು ಎಂಬ ವಿಷಯದ ಬಗ್ಗೆ ಮಾತನಾಡಿದರು.

ಸಮಾಜದ ಒಳಿತಿಗಾಗಿ ಉತ್ತಮ ಕಾರ್ಯಗಳು ನಡೆಯುವಂತಾಗಬೇಕು. ಮನುಷ್ಯ ಆರೋಗ್ಯವಂತನಾಗಲು ಆಹಾರ ಸೇವನೆ ಮತ್ತು ಮುಖದ ಅಂದಕ್ಕಾಗಿ ಹಲ್ಲುಗಳು ಅವಶ್ಯ. ಹಲ್ಲುಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಮಕ್ಕಳು ಸಿಹಿ ತಿಂಡಿ ಇತರ ವಸ್ತುಗಳನ್ನು ತಿಂದ ನಂತರ ಹಲ್ಲನ್ನು ಶುಚಿಗೊಳಿಸಬೇಕು. ನಿದ್ದೆ, ಊಟ ಮತ್ತು ದೃಢ ಸಂಕಲ್ಪ ಇರುವಂತಾಗಬೇಕು ಎಂದು ಸಲಹೆ ನೀಡಿದರು.

ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ಅರಮೇರಿ ಕಳಂಚೇರಿ ಶ್ರೀಮಠದ ಪೀಠಾಧಿಪತಿ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಆರೋಗ್ಯ ಪ್ರತಿಯೊಬ್ಬರಿಗೂ ಅವಶ್ಯ. ತಾಂತ್ರಿಕತೆ ಆಧುನಿಕ ಶಿಕ್ಷಣ ಹೆಚ್ಚಾಗಿರುವುದರಿಂದ ಮಾನಸಿಕ ಒತ್ತಡ ಹೆಚ್ಚಾಗಿದ್ದು, ನಾವು ಅವುಗಳ ಕೈಗೊಂಬೆ ಆಗುತ್ತಿದ್ದೇವೆ. ಪ್ರಾಮಾಣಿಕತೆ, ಶಿಸ್ತು, ಶ್ರಮ ಮತ್ತು ಶ್ರದ್ಧೆಯಿಂದ ಆಧ್ಯಾತ್ಮಿಕತೆ ಚಿಂತನೆ ನಡೆಸುವ ಕಡೆ ಗಮನ ಹರಿಸಿದರೆ, ನಮ್ಮ ಆರೋಗ್ಯ ಹೆಚ್ಚು ಉತ್ತಮವಾಗಿರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ವಿರಾಜಪೇಟೆ ವೈದ್ಯ ಡಾ.ಎಸ್.ವಿ.ನರಸಿಂಹನ್, ಗೋಣಿಕೊಪ್ಪದ ಕಾಳಿಮಾಡ ಡಾ.ಮೋಟಯ್ಯ, ಸಾಹಿತಿ ಕಿಗ್ಗಾಲು ಗಿರೀಶ್ ಇದ್ದರು.