ಮಣ್ಣಗುಡ್ಡೆ ಸರ್ಕಾರಿ ಹಿ.ಪ್ರಾ.ಶಾಲೆಯಲ್ಲಿ ಮಕ್ಕಳ ಸ್ವಾಗತಕ್ಕೆ ಅಲಂಕಾರ ಮಾಡಲಾಯಿತು.
ಮಂಗಳೂರು : ಬೇಸಗೆ ರಜಾ ಅವಧಿ ಮುಗಿದು ಜೂನ್ 1ರಂದು ಶಾಲೆಗಳು ಆರಂಭಗೊಳ್ಳಲಿದ್ದು, ಮಕ್ಕಳನ್ನು ಸ್ವಾಗತಿಸಲು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಕ್ಷರ ದೇಗುಲಗಳು ತಳಿರು ತೋರಣಗಳಿಂದ ಅಲಂಕೃತಗೊಂಡು ಸಿದ್ಧಗೊಂಡಿವೆ. ಮೇ 29ರಂದು ಶಾಲೆ ಆರಂಭಗೊಂಡಿದ್ದು, ಮುಖ್ಯಶಿಕ್ಷಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಶಾಲೆಯಲ್ಲಿ ಕರ್ತವ್ಯ ಆರಂಭಿಸಿದ್ದಾರೆ.
ಎರಡು ತಿಂಗಳು ಭಣಗುಡುತ್ತಿದ್ದ ಶಾಲೆಗಳು ಮತ್ತೆ ಮಕ್ಕಳ ಕಲವರದಿಂದ ಚೈತನ್ಯ ಪಡೆದುಕೊಳ್ಳಲಿವೆ. ಮೊದಲ ಬಾರಿ ಶಾಲೆ ಮೆಟ್ಟಿಲು ಹತ್ತಲಿರುವ ಒಂದನೇ ತರಗತಿಯ ಚಿಣ್ಣರನ್ನು ಬರಮಾಡಿಕೊಳ್ಳಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಶೇಷ ಸಿದ್ಧತೆ ನಡೆಸಿದೆ. ಮಕ್ಕಳನ್ನು ಹೂವು, ಸಿಹಿತಿಂಡಿ ನೀಡಿ ಶಿಕ್ಷಕರು ಸ್ವಾಗತಿಸಲಿದ್ದಾರೆ. ಮೊದಲ ದಿನವೇ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯ ಪುಸ್ತಕಗಳ ವಿತರಣೆಯಾಗಲಿದೆ.
ಬಹುತೇಕ ಶಾಲೆಗಳಲ್ಲಿ ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ಶುಕ್ರವಾರವೇ ಆಗಮಿಸಿದ್ದಾರೆ. ಶಾಲೆಯ ಸ್ವಚ್ಛತೆ, ಕುಡಿಯುವ ನೀರು, ಶೌಚಗೃಹ ಮತ್ತು ಇನ್ನಿತರ ಸೌಲಭ್ಯಗಳ ಪರಿಶೀಲನೆ, ಸಿದ್ಧತೆ ನಡೆಸಿದ್ದಾರೆ. ಶಾಸಕರು ಸಹಿತ ಜನಪ್ರತಿನಿಧಿಗಳು, ಅಧಿಕಾರಿಗಳು, ಎಸ್‌ಡಿಎಂಸಿ ಸದಸ್ಯರು, ಪಾಲಕರು ವ್ಯಾಪ್ತಿಯ ಶಾಲೆಗೆ ತೆರಳಿ ಸಂಭ್ರಮದಿಂದ ವಿದ್ಯಾರ್ಥಿಗಳನ್ನು ಸ್ವಾಗತಿಸಲಿದ್ದಾರೆ. ಮೊದಲ ದಿನ ಮಕ್ಕಳಿಗೆ ಸಿಹಿ ಊಟದ ವ್ಯವಸ್ಥೆ ಮಾಡಲಾಗಿದೆ.
ಪೋಷಕ-ಶಿಕ್ಷಕ ಸಭೆ: ಶಾಲಾರಂಭದ ದಿನದಂದು ಪ್ರತೀ ಶಾಲೆಗಳಲ್ಲೂ ಪೋಷಕರ -ಶಿಕ್ಷಕರ ಸಭೆ ನಡೆಯಲಿದೆ. ಪೋಷಕರು ಯಾವುದೇ ಸಲಹೆ ಸೂಚನೆ ನೀಡಲು ಅವಕಾಶವಿದೆ. ಜಿಲ್ಲಾ ಮಟ್ಟದ ಅಧಿಕಾರಿ, ತಾಲೂಕು ಮಟ್ಟದ ಅಧಿಕಾರಿಗಳು ಶಾಲೆಗಳಿಗೆ ತೆರಳಿ ಮಕ್ಕಳ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆದೇಶ ಹೊರಡಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1014 ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗೆ ಸಮಾನವಾಗಿ 1ರಿಂದ 5ರ ತನಕ ಕನ್ನಡದ ಜತೆಗೆ ಆಂಗ್ಲ ಮಾಧ್ಯಮವೂ ಈ ವರ್ಷದಿಂದ ಆರಂಭವಾಗುತ್ತಿದೆ. ಇದಕ್ಕೆ ಬೇಕಾದ ಶಿಕ್ಷಕರು ಹಾಗೂ ಇತರ ವ್ಯವಸ್ಥೆಗಳನ್ನು ಜೋಡಿಸಿಕೊಳ್ಳಲಾಗಿದೆ. ಖಾಸಗಿ ಶಾಲಾ ಗುಣಮಟ್ಟಕೆ ಸರ್ಕಾರಿ ಶಾಲೆಗಳನ್ನು ಕೊಂಡೊಯ್ಯುವುದು ಮತ್ತು ಗ್ರಾಮೀಣ ಮಕ್ಕಳಿಗೂ ಆಂಗ್ಲ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸುವುದು ಇದರ ಉದ್ದೇಶ.