ಜಿಲ್ಲೆ

ಹೊಳೆಆಲೂರಿನ ‘ಚಿನ್ನ’ ಕೃಷ್ಣಾ ಆಡಿನ

ಹೊಳೆಆಲೂರ: ತಮಿಳುನಾಡಿನ ಮೆಟ್ಟೂರನಲ್ಲಿ ಇತ್ತೀಚೆಗೆ ಆಯೋಜಿಸಿದ್ದ 2024-25ನೇ ಸಾಲಿನ ರಾಷ್ಟ್ರೀಯ ದಕ್ಷಿಣ ವಲಯ ಮಟ್ಟದ ಚಾಂಪಿಯನ್​ಶಿಪ್ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಗದಗ ಜಿಲ್ಲೆಯ ಹೊಳೆಆಲೂರಿನ ಕೃಷ್ಣಾ ಕಲ್ಲಪ್ಪ ಆಡಿನ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾನೆ.

68 ಕೆ.ಜಿ.ಯ 15 ವರ್ಷದೊಳಗಿನ ಜೂನಿಯರ್ ವಿಭಾಗದಲ್ಲಿ ಆಡಿನ ಸತತ ನಾಲ್ಕು ಸುತ್ತಿನಲ್ಲಿ ಮಣಿಪುರ, ಕೇರಳ, ಆಂಧ್ರಪ್ರದೇಶ, ತಮಿಳುನಾಡಿನ ಸ್ಪರ್ಧಿಗಳನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದ. ಅಂತಿಮ ಹಣಾಹಣಿಯಲ್ಲಿ ತೆಲಂಗಾಣದ ಈಶಾನ್ ಕಟಾರೆಯನ್ನು 10-0 ಅಂಕದೊಂದಿಗೆ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾನೆ.

ಕೃಷ್ಣಾ ಬಾಲ್ಯದಿಂದಲೂ ಆಟದಲ್ಲಿ ಬಹಳಷ್ಟು ಆಸಕ್ತಿ ಹೊಂದಿದ್ದ. ತಾಲೂಕು ಮತ್ತು ಜಿಲ್ಲಾ ಹಂತದ ಕ್ರೀಡಾಕೂಟದಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದಾನೆ. ಆಟದಲ್ಲಿ ಜನ ಗುರುತಿಸುವಂತಹ ಸಾಧನೆ ಮಾಡಬೇಕೆಂಬ ಹಂಬಲವನ್ನು ಪಾಲಕರ ಮುಂದೆ ವ್ಯಕ್ತ ಪಡಿಸಿದ್ದ. ಪಾಲಕರಾದ ಮುತ್ತವ್ವ-ಕಲ್ಲಪ್ಪ ಆಡಿನ ಕೂಲಿ ಕಾರ್ವಿುಕರು. ಆರ್ಥಿಕ ಮುಗ್ಗಟ್ಟಿನ ನಡುವೆಯೂ ಮಗನ ಆಸೆಗೆ ತಣ್ಣೀರು ಎರಚದೇ ಸಾಲ ಮಾಡಿ ದಾವಣಗೆರೆಯ ಯುವ ಜನಸೇವಾ ಕ್ರೀಡಾ ಇಲಾಖೆ ಹಾಗೂ ಸಬಲೀಕರಣ ನಿಲಯಕ್ಕೆ ಸೇರಿಸಿದ್ದರು.

ಯುವ ಜನ ಸೇವಾ ಕ್ರೀಡಾ ತರಬೇತಿ ಕೇಂದ್ರದ ಡಾ. ಕೆ. ವಿನೋದಕುಮಾರ ಗರಡಿಯಲ್ಲಿ ಸತತ ಎರಡು ವರ್ಷ ತರಬೇತಿ ಪೂರೈಸಿದ ಕೃಷ್ಣಾ, 2022ರಲ್ಲಿ ಶಿಗ್ಗಾಂವಿಯಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದ. 2023ರಲ್ಲಿ ರಾಮನಗರದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲೂ ಚಿನ್ನದ ಪದಕ ಪಡೆದುಕೊಂಡಿದ್ದನು.

ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಬಾರಿಗೆ ಸೌತ್ ಜೂನಿಯರ್ 15 ವರ್ಷದೊಳಗಿನ ಚಾಂಪಿಯನ್​ಶಿಪ್ ಸ್ಪರ್ಧೆಯಲ್ಲಿ ಕೃಷ್ಣಾ ಚಿನ್ನದ ಪದಕ ಪಡೆಯುವುದರ ಜತೆಗೆ ವಿವಿಧ ಸ್ಪರ್ಧೆಯಲ್ಲಿ 27 ಚಿನ್ನ , 2 ಬೆಳ್ಳಿ, 1 ಕಂಚಿನ ಪದಕ ಪಡೆಯುವ ಮೂಲಕ ಮೊದಲ ಸಲ ಕರ್ನಾಟಕ ಚಾಂಪಿಯನ್​ಶಿಪ್ ಆಗಿರುವುದು ಕನ್ನಡಿಗರು ಹೆಮ್ಮೆ ಪಡುವ ಸಂಗತಿ | ಡಾ. ಕೆ. ವಿನೋದಕುಮಾರ, ಅಂತಾರಾಷ್ಟ್ರೀಯ ಕುಸ್ತಿ ತರಬೇತಿದಾರರ