ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ ಗುತ್ತಿಗೆ ನೌಕರನೊಬ್ಬರು ಪ್ರತಿಭಟನೆ ನಡುವೆಯೇ ಕಾರ್ಖಾನೆ ಚಿಮಣಿ ಏರಿ ಕುಳಿತಿರುವುದು. 
ಜಿಲ್ಲೆ

ಚಿಮಣಿ ಏರಿ ಪ್ರತಿಭಟನೆ

ನಾಗೇಶ ಎಸ್

ಪಾಂಡವಪುರ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ ಗುತ್ತಿಗೆ ಮತ್ತು ಹಂಗಾಮಿ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸಿರುವ ಎಂಆರ್‌ಎನ್ ಸಂಸ್ಥೆ ಆಡಳಿತ ಮಂಡಳಿ ನಡೆ ಖಂಡಿಸಿ ನೌಕರನೊಬ್ಬ ಕಾರ್ಖಾನೆ ಚಿಮಣಿ ಏರಿ ಸೋಮವಾರ ಪ್ರತಿಭಟನೆ ಆರಂಭಿಸಿದ್ದಾರೆ.

ಇಲ್ಲಿನ ರೈಲ್ವೆ ನಿಲ್ದಾಣದ ಸಮೀಪವಿರುವ ಪಿಎಸ್‌ಎಸ್‌ಕೆ ಕಾರ್ಖಾನೆಯ ಕಾರ್ಮಿಕ(ಸ್ವಿಚ್ ಬೋರ್ಡ್ ಆಪರೇಟರ್) ರಾಮಕೃಷ್ಣ 510 ಅಡಿ ಉದ್ದದ ಚಿಮಣಿ ಏರಿದ್ದು, ಎಂಆರ್‌ಎನ್ ಸಂಸ್ಥೆಯ ಆಡಳಿತ ಮಂಡಳಿ ಪಿಎಸ್‌ಎಸ್‌ಕೆ ಕಾರ್ಖಾನೆ ಗುತ್ತಿಗೆ ಮತ್ತು ಹಂಗಾಮಿ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವವರಿಗೂ ಚಿಮಣಿಯಿಂದ ಕೆಳಗಿಳಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆೆ.

ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು 40 ವರ್ಷಗಳ ಅವಧಿಗೆ 405 ಕೋಟಿ ರೂ.ಗೆ ಮುರುಗೇಶ್ ಆರ್.ನಿರಾಣಿ ಒಡೆತನದ ಎಂಆರ್‌ಎನ್ ಸಂಸ್ಥೆ ಗುತ್ತಿಗೆ ಪಡೆದಿದ್ದು, ಸರ್ಕಾರ ಮತ್ತು ಸಂಸ್ಥೆಯ ನಡುವೆ ನಡೆದಿರುವ ಗುತ್ತಿಗೆ ಕರಾರನಂತೆ ಸಂಸ್ಥೆ ಪಿಎಸ್‌ಎಸ್‌ಕೆ ನೌಕರರನ್ನು ಕೆಲಸದಿಂದ ತೆಗೆಯುವಂತಿಲ್ಲ. ಆದರೆ ಸಂಸ್ಥೆಯ ಆಡಳಿತ ಮಂಡಳಿ ಪ್ರಸಕ್ತ ಹಂಗಾಮಿನ ಕಬ್ಬು ಅರೆಯುವಿಕೆ ಮುಗಿದ ಬಳಿಕ ಪಿಎಸ್‌ಎಸ್‌ಕೆ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸಿದೆ. ಹೀಗಾಗಿ, ಗುತ್ತಿಗೆ ಕಾರ್ಮಿಕರು ಜ.31ರಿಂದ ಕಾರ್ಖಾನೆ ಸಿಜೆಎಂ ಸಂಜಿತ್‌ಕುಮಾರ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಫೆ.2ರಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕಾರ್ಖಾನೆಯ ಮುಖ್ಯಸ್ಥರೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಕಾರ್ಮಿಕರು ಪ್ರತಿಭಟನೆ ಕೈಬಿಟ್ಟು ಆಡಳಿತ ಮಂಡಳಿ ನಿರ್ಧಾರಕ್ಕೆ ಕಾಯುತ್ತಿದ್ದರು.

ಎಂಆರ್‌ಎನ್ ಸಂಸ್ಥೆಯ ಸಿಜೆಎಂ ಸಂಜಿತ್ ಕುಮಾರ್ ಅವರು ಜ.7ರಂದು ರಾಜ್ಯ ಕಬ್ಬು ಅಭಿವೃದ್ಧಿ ಇಲಾಖೆಯ ಕಮೀಷನರ್ ಅವರಿಗೆ ಪತ್ರ ಬರೆದು, ಪಿಎಸ್‌ಎಸ್‌ಕೆ ಗುತ್ತಿಗೆೆ ಕಾರ್ಮಿಕರು ಪ್ರತಿಭಟನೆ ಹೆಸರಿನಲ್ಲಿ ಅನಾವಶ್ಯಕವಾಗಿ ತೊಂದರೆ ಕೊಡುತ್ತಿದ್ದಾರೆ. ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಸ್ಥಳೀಯರೊಂದಿಗೆ ಸೇರಿಕೊಂಡು, ತಮ್ಮ ಬೇಡಿಕೆಗಳು ಈಡೇರದಿದ್ದರೆ ಕಾರ್ಖಾನೆಯ ಯಂತ್ರೋಪಕರಣ ಹಾನಿಗೊಳಿಸುವಂತೆ ಇತರ ಕಾರ್ಮಿಕರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪತ್ರ ಬರೆದಿದ್ದರು. ಇದರಿಂದ ಆಕ್ರೋಶಗೊಂಡ ಕಾರ್ಮಿಕರು ಜ.12 ರಿಂದ ಮತ್ತೆ ಪ್ರತಿಭಟನೆಗೆ ಇಳಿದಿದ್ದರು. ಆಡಳಿತ ಮಂಡಳಿಯವರು ಪ್ರತಿಭಟನೆಗೆ ಮಣಿಯದಿದ್ದರಿಂದ ಕಾರ್ಮಿಕನೊಬ್ಬ ಚಿಮಣಿ ಏರಿ ಪ್ರತಿಭಟನೆಗೆ ಇಳಿದಿದ್ದಾರೆ.

ಕಾರ್ಖಾನೆ ಆಡಳಿತ ಮಂಡಳಿ ನಡೆ ವಿರುದ್ಧ ರಾಜ್ಯ ಹೈಕೋರ್ಟ್ ಕೂಡ ಆದೇಶ ನೀಡಿದ್ದು, ಕಾರ್ಮಿಕರನ್ನು ಗುತ್ತಿಗೆ ಕರಾರಿನಂತೆ ನಡೆಸಿಕೊಳ್ಳುವಂತೆ ಸೂಚಿಸಿದೆ. ಆದರೂ ಎಂಆರ್‌ಎಸ್ ಆಡಳಿತ ಮಂಡಳಿ ನ್ಯಾಯಾಲಯದ ಆದೇಶ ಪಾಲಿಸುತ್ತಿಲ್ಲ. ಉತ್ತರ ಭಾರತದವದ ಕಾರ್ಮಿಕರಿಗೆ ಸಂಸ್ಥೆ ಕೆಲಸ ನೀಡಿದೆ. ಗುತ್ತಿಗೆ ಆಧಾರದ ಮೇಲೆ ಕಳೆದ ಎರಡು ದಶಕಗಳಿಂದ ಕೆಲಸ ನಿರ್ವಹಿಸುತ್ತಿರುವ ಸ್ಥಳೀಯರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದೆ. ಎಂಆರ್‌ಎನ್ ಸಂಸ್ಥೆ ಕಾರ್ಖಾನೆ ಗುತ್ತಿಗೆ ಪಡೆಯುವ ಸಂದರ್ಭದಲ್ಲಿ ಪಿಎಸ್‌ಎಸ್‌ಕೆ ಕಾರ್ಖಾನೆ ನೌಕರರನ್ನು ಮುಂದುವರೆಸಿಕೊಂಡು ಹೋಗುವಂತೆ ಸರ್ಕಾರದೊಂದಿಗೆ ಕರಾರು ಮಾಡಿಕೊಂಡಿದ್ದು ಅದರಂತೆ ಸಂಸ್ಥೆ ಕಾರ್ಮಿಕರನ್ನು ನಡೆದುಕೊಳ್ಳಬೇಕು. ಆದರೆ ಉದ್ದೇಶಪೂರ್ವಕವಾಗಿ ಪಿಎಸ್‌ಎಸ್‌ಕೆ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ. ಅಲ್ಲದೆ ಪ್ರತಿ ಹಂಗಾಮಿನಲ್ಲೂ ನೌಕರರಿಗೆ ತೊಂದರೆ ಕೊಡಲಾಗುತ್ತಿದೆ ಎಂಬುದು ಪ್ರತಿಭಟನಾ ನಿರತ ಕಾರ್ಮಿಕರ ದೂರು.

ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಜ.17ರಂದು ಕಾರ್ಖಾನೆ ಆಡಳಿತ ಮಂಡಳಿಯ ಮುಖ್ಯಸ್ಥರಿಗೆ ಪತ್ರ ಬರೆದು, ಹೈ ಕೋರ್ಟ್ ಆದೇಶವನ್ನು ಚಾಚುತಪ್ಪದೆ ಪಾಲಿಸುವಂತೆ ಈ ಹಿಂದೆ ನಿರ್ದೇಶಿಸಿದ್ದರು. ಆದಾಗ್ಯೂ ತಾವು ಆದೇಶ ಪಾಲನೆ ಮಾಡದಿರುವುದು ಸರಿಯಲ್ಲ. ಸಕ್ಕರೆ ಆಯುಕ್ತರು ಕೂಡ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಕಾರ್ಖಾನೆ ನೌಕರರ ಹಿತ ಕಾಪಾಡುವುದು ನಿಮ್ಮ ಕರ್ತವ್ಯ. ಕರಾರು ಪತ್ರ ಕಂಡಿಕೆ 46ರ ರೀತಿ ಹಾಗೂ ಸರ್ಕಾರದ ಆದೇಶ ಪಾಲನೆ ಮಾಡತಕ್ಕದ್ದು. ಇಲ್ಲವಾದಲ್ಲಿ ಮುಂದಿನ ಎಲ್ಲ ಕ್ರಮಗಳಿಗೂ ಎಂಆರ್‌ಎನ್ ಸಂಸ್ಥೆಯ ಆಡಳಿತ ಮಂಡಳಿಯನ್ನೆ ಹೊಣೆಗಾರರನ್ನಾಗಿ ಮಾಡುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸ್ಥಳಕ್ಕೆ ತಹಸೀಲ್ದಾರ್ ಎಸ್.ಸಂತೋಷ್, ಪೊಲೀಸ್ ಇನ್‌ಸ್ಪೆಕ್ಟರ್ ವಿವೇಕಾನಂದ ಇತರರು ತೆರಳಿ ಘಟನೆ ಸಂಬಂಧ ಆಡಳಿತ ಮಂಡಳಿಯವರೊಂದಿಗೆ ಚರ್ಚಿಸಿದರು.