ಬೆಂಗಳೂರು: ಚಿಲುಮೆ ಸಂಸ್ಥೆಯಿಂದ ಅಕ್ರಮವಾಗಿ ಮತದಾರರ ಖಾಸಗಿ ಮಾಹಿತಿ ಸಂಗ್ರಹ ಮಾಡಿದ ಆರೋಪ ರಾಜ್ಯ ರಾಜಕೀಯದಲ್ಲೇ ಸಂಚಲನ ಸೃಷ್ಟಿಸಿದೆ. ಚಿಲುಮೆ ಸಂಸ್ಥೆಯಿಂದ ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹ ಆರೋಪ ಸಂಬಂಧ ಹಲಸೂರ್ ಗೇಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರಿಗೆ ದೊಡ್ಡ ತಲೆನೋವಾಗಿರುವ ಸಂಗತಿ ಈ 'ಬಾಸ್' ಅನ್ನು ಹುಡುಕುವ ಕೆಲಸ.
ಈಗ ಪ್ರಕರಣದ ತನಿಖೆ ಕೊನೆಯ ಹಂತಕ್ಕೆ ತಲುಪಿದ್ದು ಇನ್ನು ಬಿಬಿಎಂಪಿ ಕಮೀಷನರ್ ತುಷಾರ್ ಗಿರಿನಾಥ್ ವಿಚಾರಣೆ ಮಾತ್ರ ಬಾಕಿ ಇದೆ. ಆದರೆ ನಿಜ ತಲೆನೋವು ಅದಲ್ಲ. ಚಿಲುಮೆ ಸಂಸ್ಥೆ ಕೆಲಸಗಾರರು ವಿಚಾರಣೆ ಸಂದರ್ಭ 'ಬಾಸ್ ಹೇಳಿದಂತೆ ಕೆಲಸ ಮಾಡಿದ್ದೇವೆ' ಎಂದಿದ್ದರು. ಆದರೆ ಪೊಲೀಸರಿಗೆ ಯಾರು ಬಾಸ್ ಅನ್ನೋದು ಇದುವರೆಗೂ ಗೊತ್ತಾಗಿಲ್ಲ.
ಬಂಧಿಸಿರುವ 15 ಆರೋಪಿಗಳನ್ನು ಬಾಸ್ ಬಗ್ಗೆ ಪ್ರಶ್ನೆ ಮಾಡಿದರೂ ಇನ್ನೂ ಪೊಲೀಸರಿಗೆ ಸುಳಿವು ಸಿಕ್ಕಿಲ್ಲ. ಇತ್ತ ಐಎಎಸ್ ಅಧಿಕಾರಿಗಳ ವಿಚಾರಣೆ ವೇಳೆಯೂ ಯಾವುದೇ ಮಾಹಿತಿ ಸಿಗುತ್ತಿಲ್ಲ. ಈ ಕೆಲಸವನ್ನು ಯಾವ ಬಾಸ್ ಹೇಳಿದ ಹಾಗೆ ಮಾಡಿರೋದು ಎನ್ನುವ ಮಾಹಿತಿ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.