ಹುಬ್ಬಳ್ಳಿ: ಕೆಂಪು ಒಣ ಮೆಣಸಿನಕಾಯಿ ಸೀಜನ್ ಆರಂಭವಾಗಿದ್ದು, ಈ ವರ್ಷದ ಆರಂಭದಲ್ಲೇ ಇಲ್ಲಿಯ ಎಪಿಎಂಸಿಗೆ ಹೆಚ್ಚು ಆವಕವಾಗುತ್ತಿದೆ. ಶನಿವಾರ 40 ಸಾವಿರ ಚೀಲಗಳು ಒಣಮೆಣಸಿನಕಾಯಿ ಬಂದಿತ್ತು.
ಹುಬ್ಬಳ್ಳಿ ಎಪಿಎಂಸಿಯಲ್ಲಿ ಮೆಣಸಿನಕಾಯಿಗೆ ಉತ್ತಮ ದರವೂ ಸಿಗುತ್ತಿದೆ. ಪ್ರತಿ ಕ್ವಿಂಟಾಲ್ ಗೆ ಉತ್ತಮ ಗುಣಮಟ್ಟದ ಕಡ್ಡಿ ಮೆಣಸಿನಕಾಯಿ ಗರಿಷ್ಠ 45 ಸಾವಿರ ರೂ.ವರೆಗೆ ಮಾರಾಟವಾಗಿದೆ.
ಏಷ್ಯಾದಲ್ಲಿಯೇ ದೊಡ್ಡದೆಂಬ ಖ್ಯಾತಿ ಹೊಂದಿರುವ ಇಲ್ಲಿಯ ಎಪಿಎಂಸಿಗೆ ಧಾರವಾಡ, ಹಾವೇರಿ, ಗದಗ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ವಿಜಯಪುರ ಮುಂತಾದ ಜಿಲ್ಲೆಗಳಿಂದ ಮೆಣಸಿನಕಾಯಿ ಆವಕವಾಗಿತ್ತು.
ಶನಿವಾರ ಎಪಿಎಂಸಿಗೆ 13300 ಕ್ವಿಂಟಾಲ್ (40 ಸಾವಿರ ಚೀಲ) ಮೆಣಸಿನಕಾಯಿ ಬಂದಿದೆ. ಕನಿಷ್ಠ ದರ ಪ್ರತಿ ಕ್ವಿಂಟಾಲ್ಗೆ 1500 ರೂ. ನಿಂದ ಗರಿಷ್ಠ 45200 ರೂ. ವರೆಗೆ ಟೆಂಡರ್ ಆಗಿದೆ ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಾರಿ ಮೆಣಸಿನಕಾಯಿ ಉತ್ತಮ ಇಳುವರಿ ಬರುತ್ತಿದೆ. ಹುಬ್ಬಳ್ಳಿ ಎಪಿಎಂಸಿಯಲ್ಲಿ ಬೆಲೆ ಹೆಚ್ಚು ಸಿಗುತ್ತದೆ. ಅದಕ್ಕಾಗಿ ತಂದಿದ್ದೇವೆ. ಕ್ವಿಂಟಾಲ್ಗೆ 30- 40 ಸಾವಿರ ರೂ. ವರೆಗೆ ಸಿಕ್ಕರೆ ಅನುಕೂಲ ಎಂದು ಬಾಗಲಕೋಟೆ ರೈತ ಮಹಾಂತೇಶ ಹೇಳಿದರು.