ಕುರುಗೋಡು ತಾಲೂಕಿನಲ್ಲಿ ತಡರಾತ್ರಿ ಸುರಿದ ಮಳೆಯಿಂದ ರೈತರು ಒಣ ಮೆಣಸಿನಕಾಯಿ ರಾಶಿಯ ರಕ್ಷಣೆಗೆ ಟಾರ್ಪಲ್ ಮೊರೆಹೋಗಿರುವುದು. 
ಜಿಲ್ಲೆ

ಮೆಣಸಿನಕಾಯಿ ರಾಶಿ ರಕ್ಷಣೆ

ರುದ್ರಪ್ಪ ವಾಲಿ

ಕುರುಗೋಡು: ತಾಲೂಕಿನಲ್ಲಿ ತಡ ರಾತ್ರಿ ವಿವಿಧೆಡೆ ಸುರಿದ ಗುಡುಗು ಸಹಿತ ಮಳೆಯಿಂದ ಎಲ್ಲೆಡೆ ಹಳ್ಳ, ಕೊಳ್ಳಗಳಿಗೆ ಜೀವಕಳೆ ಬಂದಿದೆ. ಕುರುಗೋಡು, ಕುಡುತಿನಿ, ತೋರಣಗಲ್ಲು, ವದ್ದಟ್ಟಿ, ಯಲ್ಲಾಪುರ, ಶ್ರೀನಿವಾಸ್ ಕ್ಯಾಂಪ್, ಲಕ್ಷ್ಮೀಪುರ, ಕಲ್ಲುಕಂಬ, ಸೋಮಲಾಪುರ, ಕೆರೆಕೆರೆ, ಎಚ್ ವೀರಾಪುರ ಸೇರಿದಂತೆ ವಿವಿಧೆಡೆ ತಡ ರಾತ್ರಿ 11 ಗಂಟೆಗೆ ಆರಂಭವಾದ ಮಳೆ, ಬೆಳಗ್ಗೆ 6 ಗಂಟೆ ತನಕ ಸರಾಸರಿ 22 ಮಿಲಿಮೀಟರ್ ಮಳೆ ದಾಖಲಾಗಿದೆ. ಇದರ ಪರಿಣಾಮ ಹಲವೆಡೆ ಒಣ ಮೆಣಸಿನಕಾಯಿ ರಾಶಿಯ ರಕ್ಷಣೆಗೆ ರೈತರು ರಾತ್ರೋರಾತ್ರಿ ಮಳೆಯನ್ನು ಲೆಕ್ಕಿಸದೆ ಟಾರ್ಪಲ್ ಮೊರೆಹೋಗಿದ್ದು ಕಂಡು ಬಂತು.

ಬೆಳಗಾವಿ, ವಿಜಯಪುರ, ಹಾವೇರಿ ವಿಜಯನಗರದಿಂದ ಕುರಿಗಳಿಗೆ, ಹಾಗೂ ರಾಸುಗಳಿಗೆ ಮೇವು ಹರಸಿ ಬಂದಿರುವ ಸಂಚಾರಿ ದನ ಹಾಗೂ ಕುರಿಗಾಯಿಗಳು ಮಳೆಗೆ ಆಹಾರ ಧಾನ್ಯ ಮತ್ತು ಪರಿಕರ ಸಂಪೂರ್ಣ ಒದ್ದೆಯಾಗಿದ್ದು ಜೀವನ ಅಸ್ತವ್ಯಸ್ತವಾಗಿದೆ.

ಕಳೆದ ಎರಡು ತಿಂಗಳಿಂದ ತಾಲೂಕಿನಲ್ಲಿ ರೈತರ ಅನುಮತಿ ಪಡೆದು ಜಮೀನುಗಳಲ್ಲಿ ಕುರಿ ಮೇಯಿಸಿದ ಬಳಿಕ ಅವರ ಜಮೀನುಗಳಲ್ಲಿ ರಾತ್ರಿ ಬೀಡುಬೀಡಲಾಗುತ್ತಿತ್ತು. ಸಧ್ಯ ಈ ಭಾಗದಲ್ಲಿ ಮೇವು ಕ್ಷೀಣಿಸುತ್ತಾ ಬರುತ್ತಿದ್ದು, ಸಾಲದಿದ್ದಕ್ಕೆ ಮಳೆ ಕೂಡ ಆರಂಭವಾಗಿರುವುದರಿಂದ ಕುರಿ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ. ಹೀಗಾಗಿ ಇನ್ನೊಂದೆರಡು ದಿನ ನೋಡಿ ಬೇರೆ ಕಡೆ ಹೋಗಲು ಯೋಚಿಸಿದ್ದೇವೆ ಎನ್ನುತ್ತಾರೆ ವಿಜಯಪುರ ಮೂಲದ ಸಂಜೀವಪ್ಪ.