ಚಿಕ್ಕಬಳ್ಳಾಪುರ: ಸಂಕಷ್ಟದಲ್ಲಿರುವ ಮಕ್ಕಳ ಸಮಸ್ಯೆಯನ್ನು ಅರಿತು, ಪರಿಹರಿಸುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಅರುಣಾ ಕುಮಾರಿ ಸಲಹೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿ.ಪಂ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೈಗೊಂಡಿದ್ದ ಜಿಲ್ಲಾ ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಷ್ಟ್ರವ್ಯಾಪ್ತಿಯಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರಗಳು ಚಾಲ್ತಿಯಲ್ಲಿವೆ. ಇಲ್ಲಿ ಯಾವುದೇ ರೀತಿಯ ಸಂಕಷ್ಟ ಪರಿಸ್ಥಿತಿಯಲ್ಲಿರುವ, ರಕ್ಷಣೆ ಮತ್ತು ಪಾಲನೆ ಅವಶ್ಯಕತೆ ಇರುವ ಮಕ್ಕಳಿಗೆ ತುರ್ತು ಸೇವೆಯನ್ನು ಒದಗಿಸಲಾಗುತ್ತದೆ ಎಂದರು.
ಸಹಾಯವಾಣಿ ಕೇಂದ್ರಗಳಲ್ಲಿ ಯಾವುದೇ ಕರೆ ಬಂದರೂ ಸಂಬಂಧಪಟ್ಟ ಸಿಬ್ಬಂದಿ ಸೇವಾ ಮನೋಭಾವನೆ, ತಾಳ್ಮೆಯಿಂದ ಸಮಸ್ಯೆಯನ್ನು ಆಲಿಸಬೇಕು. ತ್ವರಿತವಾಗಿ ಸಮಸ್ಯೆ ಬಗೆಹರಿಸಬೇಕು. ಇದರ ಮೂಲಕ ಸಂಕಷ್ಟ ಪರಿಸ್ಥಿತಿಯಲ್ಲಿರುವ ಅನಾಥ, ಏಕಪಾಲಕ, ಪರಿತ್ಯಕ್ತ, ಶೋಷಣೆ ಮತ್ತು ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ನ್ಯಾಯ ಒದಗಿಸಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು ಎಂದರು.
ಮಗುವನ್ನು ತಾಯಿ ಪ್ರೀತಿಯಿಂದ ಸಾಕಿ ಸಲುಹುತ್ತಾಳೆ. ಹಾಗೆಯೇ ಮಕ್ಕಳ ಸಂಕಷ್ಟ ಪರಿಹಾರಕ್ಕೆ ಇರುವವರು ಮೊದಲು ತಾಯಿ ಹೃದಯವನ್ನು ಹೊಂದಿರಬೇಕು ಎಂದರು.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ಜಿಲ್ಲೆಯ ಸಹಾಯವಾಣಿ ಕೇಂದ್ರವು ಇತರೆ ಭಾಗಗಳಿಗೆ ಮಾದರಿಯಾಗಿ ಕಾರ್ಯ ನಿರ್ವಹಿಸಿ, ಮೆಚ್ಚುಗೆಗೆ ಪಾತ್ರರಾಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಸಿ.ಅಶ್ವತ್ಥಮ್ಮ ಮಾತನಾಡಿ, ಮಕ್ಕಳ ಸಹಾಯವಾಣಿಯು ಇದುವರೆಗೆ ಸ್ವಯಂ ಸೇವಾ ಸಂಸ್ಥೆಗಳಿಂದ ನಿರ್ವಹಿಸಲ್ಪಡುತ್ತಿದ್ದವು. ಇದೀಗ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ಭವನದಲ್ಲಿಯೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯಕ್ರಮದಡಿ ಸ್ಥಾಪಿಸಲಾಗಿದೆ. ಇಲ್ಲಿ ಪಾಳಿ ಮೇಲೆ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಮತ್ತಿತರರು ಇದ್ದರು.