ಮಡಿಕೇರಿ:
ಕೊಡಗಿನಲ್ಲಿ ಈ ವರ್ಷ ಮಕ್ಕಳ ಅಪಹರಣ ಪ್ರಕರಣ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ. ೨೦೨೩ರಲ್ಲಿ ಕೇವಲ ಜೂ. ೧೫ರ ತನಕದ ಅವಧಿಯಲ್ಲಿ ಮಕ್ಕಳ ಅಪಹರಣಕ್ಕೆ ಸಂಬಂಧಿಸಿದ ಒಟ್ಟು ೧೩ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ. ಇದರಲ್ಲಿ ೧೨ ಪ್ರಕರಣಗಳು ಬಾಲಕಿಯರ ಅಪಹರಣಕ್ಕೆ ಸಂಬಂಧಿಸಿದ್ದು ಎನ್ನುವುದು ಚಿಂತಿಸುವಂತೆ ಮಾಡಿದೆ. ಈ ಪೈಕಿ ಬಾಲಕಿಯರಿಗೆ ಸಂಬಂಧಿಸಿದ ೨ ಪ್ರಕಣಗಳನ್ನು ಭೇದಿಸಲಾಗಿದ್ದು, ಬಾಲಕನ ಅಪಹರಣ ಪ್ರಕರಣದ ತನಿಖೆ ನಡೆಯುತ್ತಿದೆ. ಈ ಅವಧಿಯಲ್ಲಿ ಒಬ್ಬ ಬಾಲಕಿಯ ನಾಪತ್ತೆ ಪ್ರಕರಣವೂ ದಾಖಲಾಗಿದ್ದು, ಪ್ರಕರಣ ಇತ್ಯರ್ಥವಾಗಿದೆ.
ಚಿಕ್ಕ ಜಿಲ್ಲೆಯೂ ಆಗಿರುವ ಕೊಡಗಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರಿಗೆ ಸುಲಭದ ಕೆಲಸ. ಇದಕ್ಕಿಂತಲೂ ಹೆಚ್ಚಾಗಿ ಶಿಸ್ತಿಗೆ ಹೆಸರಾಗಿರುವ ಕೊಡಗಿನವರು ಕಾನೂನಿಗೆ ಸಾಕಷ್ಟು ಗೌರವ ಕೊಡುತ್ತಾರೆ. ಆದರೂ ಅಲ್ಲೊಂದು ಇಲ್ಲೊಂದು ಅಪರಾಧ ಪ್ರಕರಣಗಳು ನಡೆದು ಹೋಗಿಬಿಡುತ್ತದೆ. ಹೆಚ್ಚಿನ ಪ್ರಕರಣಗಳನ್ನು ಪೊಲೀಸರು ಸುಲಭವಾಗಿ ಭೇದಿಸಿದರೂ ಹಲವು ಕಗ್ಗಂಟಾಗಿಯೇ ಉಳಿದುಬಿಡುತ್ತವೆ. ಇವುಗಳಲ್ಲಿ ಜಟಿಲವಾದ ಮಕ್ಕಳ ನಾಪತ್ತೆ ಮತ್ತು ಅಪಹರಣ ಪ್ರಕರಣಗಳೂ ಸೇರಿವೆ.
ರಾಜ್ಯಾದ್ಯಂತ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಾಪತ್ತೆ ಮತ್ತು ಅಪಹರಣಕ್ಕೆ ಒಳಗಾಗಿರುವ ಮಕ್ಕಳ ಅಂಕಿ, ಅಂಶಕ್ಕೆ ಸಂಬಂಧಿಸಿದ ಮಾಹಿತಿಯನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ ವಿಧಾನಪರಿಷತ್‌ನಲ್ಲಿ ಕೊಟ್ಟಿದ್ದಾರೆ. ಇದರಲ್ಲಿ ಕೊಡಗಿಗೆ ಸಂಬಂಧಿಸಿದ ವಿವರಗಳೂ ಇದ್ದು ಆತಂಕ ಹುಟ್ಟಿಸುವಂತಿದೆ. ಜಿಲ್ಲೆಯಲ್ಲಿ ೨೦೧೮ರಿಂದ ಈಚೆಗೆ ಮಕ್ಕಳ ಅಪಹರಣಕ್ಕೆ ಸಂಬಂಧಿಸಿದ ಒಟ್ಟು ೨೧ ಪ್ರಕರಣಗಳನ್ನು ಪತ್ತೆಹಚ್ಚಲು ಕೂಡ ಸಾಧ್ಯವಾಗಿಲ್ಲ. ಈ ಎಲ್ಲಾ ಪ್ರಕರಣಗಳೂ ಬಾಲಕಿಯರಿಗೆ ಸಂಬಂಧಿಸಿದ್ದು ಎನ್ನುವುದು ಕಳವಳಕಾರಿ ವಿಷಯ.
೨೦೧೮ರಲ್ಲಿ ತಲಾ ಇಬ್ಬರು ಬಾಲಕರು ಮತ್ತು ಮೂವರು ಬಾಲಕಿಯರ ಅಪಹರಣ ಪ್ರಕರಣ ನಡೆದಿತ್ತು. ಈ ಐದೂ ಪ್ರಕರಣಗಳನ್ನು ಭೇದಿಸಲಾಗಿದೆ. ೨೦೧೯ರಲ್ಲಿ ಬಾಲಕರ ಅಪಹರಣದ ಒಟ್ಟು ೯ ಪ್ರಕರಣಗಳು ದಾಖಲಾಗಿದ್ದು, ೮ ಪ್ರಕರಣಗಳಿಗೆ ಇತಿಶ್ರೀ ಹಾಡಲಾಗಿದೆ. ಬಾಲಕಿಯರ ೧೫ ಅಪಹರಣ ಪ್ರಕರಣಗಳಲ್ಲಿ ೧೨ ಪ್ರಕರಣಗಳಿಗೆ ಅಂತ್ಯ ಕಾಣಿಸಲಾಗಿದೆ. ೨೦೨೦ರಲ್ಲಿ ದಾಖಲಾಗಿದ್ದ ಬಾಲಕರ ಅಪಹರಣಕ್ಕೆ ಸಂಬಂಧಿಸಿದ ೫ ಪ್ರಕರಣಗಳಲ್ಲಿ ಎಲ್ಲವನ್ನೂ ಭೇದಿಸಲಾಗಿದೆ. ಆದರೆ ಬಾಲಕಿಯರ ಅಪರಣಕ್ಕೆ ಸಂಬಂಧಿಸಿದ ೧೨ ಪ್ರಕರಣಗಳಲ್ಲಿ ಒಂದು ಪ್ರಕರಣ ಇನ್ನೂ ಹಾಗೆಯೇ ಉಳಿದುಕೊಂಡಿದೆ.
೨೦೨೧ರಲ್ಲಿ ನಡೆದಿದ್ದ ಬಾಲಕರ ಅಪಹರಣಕ್ಕೆ ಸಂಬಂಧಿಸಿದ ೮ ಪ್ರಕರಣಗಳಲ್ಲಿ ಎಲ್ಲ ಪ್ರಕರಣಗಳಿಗೂ ಮೋಕ್ಷ ನೀಡಲಾಗಿದೆ. ಬಾಲಕಿಯರ ಅಪಹರಣಕ್ಕೆ ಸಂಬಂಧಿಸಿದಂತೆ ಒಟ್ಟು ೩೦ ಪ್ರಕರಣಗಳು ದಾಖಲಾಗಿದ್ದು ೨೭ ಪ್ರಕರಣಗಳನ್ನು ಮಾತ್ರ ಭೇದಿಸಲಾಗಿದೆ. ೨೦೨೨ರಲ್ಲಿ ದಾಖಲಾಗಿದ್ದ ಬಾಲಕರ ೭ ಅಪಹರಣ ಪೈಕಿ ಎಲ್ಲವೂ ಬಗೆಹರಿದಿದೆ. ಆದರೆ ಬಾಲಕಿಯರ ಅಪಹರಣದ ೧೯ ಪ್ರಕರಣಗಳಲ್ಲಿ ಇನ್ನೂ ೩ ಪ್ರಕರಣಗಳನ್ನು ಬಯಲಿಗೆ ಎಳೆಯಲು ಸಾಧ್ಯವಾಗಿಲ್ಲ. ೨೦೨೩ರ ಜೂ.೧೫ರ ತನಕ ಜಿಲ್ಲೆಯಲ್ಲಿ ಬಾಲಕಿಯರ ಅಪಹರಣಕ್ಕೆ ಸಂಬಂಧಿಸಿದ ೧೨ ಪ್ರಕರಣಗಳು ದಾಖಲಾಗಿದ್ದು ಕೇವಲ ೨ ಪ್ರಕರಣಗಳನ್ನು ಮಾತ್ರ ಪೊಲೀಸರು ಭೇದಿಸಿದ್ದಾರೆ. ದಾಖಲಾಗಿರುವ ಒಬ್ಬ ಬಾಲಕನ ಅಪಹರಣ ಪ್ರಕರಣವೂ ಹಾಗೆಯೇ ಉಳಿದುಕೊಂಡಿದೆ.
ಮಕ್ಕಳ ನಾಪತ್ತೆ ಮತ್ತು ಅಪಹರಣ ಪ್ರಕರಣಗಳನ್ನು ಭೇದಿಸಲು ಮತ್ತು ತಡೆಗಟ್ಟಲು ಸರ್ಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಯಾವುದೇ ನಾಪತ್ತೆ ಪ್ರಕರಣವನ್ನು ಪೊಲೀಸರು ೬೦ ದಿನಗಳಲ್ಲಿ ಪತ್ತೆ ಮಾಡದಿದ್ದರೆ ಅಂತಹ ಪ್ರಕರಣದ ಪರಿಣಾಮಕಾರಿ ತನಿಖೆಗಾಗಿ ವಿಶೇಷ ಮಾನವ ಕಳ್ಳಸಾಗಣೆ ವಿರೋಧಿ ಘಟಕಕ್ಕೆ ವರ್ಗಾಯಿಸಲಾಗುತ್ತದೆ. ರಾಜ್ಯದಲ್ಲಿ ೩೫ ಮಾನವ ಕಳ್ಳಸಾಗಣೆ ತಡೆ ಘಟಕಗಳಿವೆ. ಪೊಲೀಸರು ನಾಪತ್ತೆಯಾದವರ ಸಂಬಂಧಿಕರು ಮತ್ತು ಸ್ನೇಹಿತರನ್ನು ವಿಚಾರಿಸುವುದರ ಹೊರತಾಗಿ ಮಿಸ್ಸಿಂಗ್ ಗೆಜೆಟ್ ನೀಡುತ್ತಾರೆ. ಅಪರಿಚಿತ ಶವಗಳನ್ನೂ ಪರಿಶೀಲಿಸಲಾಗುತ್ತದೆ. ಅನಾಥಾಶ್ರಮಗಳು, ಆಶ್ರಮಗಳು, ಆಧ್ಯಾತ್ಮಿಕ ಸ್ಥಳಗಳು ಮತ್ತು ಬಾಲ ಮಂದಿರಗಳನ್ನು ಪರಿಶೀಲಿಸಲಾಗುತ್ತದೆ, ನೆರೆಯ ಜಿಲ್ಲೆಗಳಲ್ಲಿ ಶೋಧ ನಡೆಸಲಾಗುತ್ತದೆೆ.
ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೀಟ್ ಸಿಬ್ಬಂದಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಾನವ ಕಳ್ಳಸಾಗಣೆ ಪ್ರಕರಣಗಳ ಕುರಿತು ಮಾಹಿತಿ ಸಂಗ್ರಹಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಕರಣ ಭೇದಿಸಲು ಸಾಮಾಜಿಕ ಜಾಲತಾಣಗಳನ್ನು ಗರಿಷ್ಟ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತಿದೆ. ದಕ್ಷ ಅಧಿಕಾರಿಗಳ ತಂಡ ಕಟ್ಟಿ ಎಲ್ಲಾ ಕಡೆ ಹುಡುಕಾಡುವುದಕ್ಕೆ ಆದ್ಯತೆ ನೀಡಲಾಗಿದೆ. ಅಪರಿಚಿತ ವ್ಯಕ್ತಿಗಳ ಬಳಿ ಸಂಪರ್ಕ ಇಟ್ಟುಕೊಳ್ಳದಂತೆ, ಆಸೆ ಆಮಿಷಗಳನ್ನು ಒಡ್ಡುವವರ ಬಗ್ಗೆ ಹುಷಾರಾಗಿ ಇರುವಂತೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹಾಗೂ ಗ್ರಾಮಗಳಲ್ಲಿ ತಿಳುವಳಿಕೆಗಳನ್ನು ನೀಡಲಾಗುತ್ತಿದೆ. ಅಪರಾಧ ಚಟುವಟಿಕೆಗಳಲ್ಲಿ ಹಾಗೂ ಮಕ್ಕಳ ಭಿಕ್ಷಾಟನೆಯಲ್ಲಿ ತೊಡಗಿಸಿರುವಂಥ ಅಪರಿಚಿತ ವ್ಯಕ್ತಿಗಳು ಕಂಡು ಬಂದಲ್ಲಿ ಅಂಥವರ ಕುರಿತು ಠಾಣೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಮಹಿಳೆ ಮತ್ತು ಮಕ್ಕಳ ಸುರಕ್ಷತೆಗಾಗಿ ವಿವಿಧ ಹೆಸರುಗಳಡಿಯಲ್ಲಿ ವಿಶೇಷ ಪಡೆಗಳನ್ನು ರಚಿಸಿದ್ದು, ಈ ಪಡೆಗಳು ನಗರದ ಮತ್ತು ಜಿಲ್ಲಾ ವ್ಯಾಪ್ತಿಯ ಶಾಲಾ- ಕಾಲೇಜು, ಪಾರ್ಕ್‌ಗಳು, ಹಾಸ್ಟೆಲ್, ಪಿಜಿ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಓಡಾಡುವ ಸ್ಥಳಗಳ ಪ್ರತಿದಿನ ಗಸ್ತು ಮಾಡುತ್ತಾ ಅರಿವು ಮೂಡಿಸಲಾಗುತ್ತಿದೆ. ಬಸ್ ನಿಲ್ದಾಣ, ರೈಲು ನಿಲ್ದಾಣ, ವಿಮಾಣ ನಿಲ್ದಾಣ ಮತ್ತು ಜನನಿಬಿಡ ಸ್ಥಳಗಳಲ್ಲಿ ಹಾಗೂ ಪ್ರಮುಖ ಸ್ಥಳಗಳನ್ನು ಗುರುತಿಸಿ ಸಿಸಿ ಟಿ.ವಿ ಕ್ಯಾಮರಾಗಳನ್ನು ಅಳವಡಿಸಿದ್ದು ಅವುಗಳ ಸಹಾಯದಿಂದ ಮಹಿಳೆಯರ ಮತ್ತು ಮಕ್ಕಳ ಸಾಗಾಟ ಮಾಡುವವರ ಮೇಲೆ ನಿಗಾವಹಿಸಲಾಗಿದೆ.
ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬೀಟ್ ಸಿಬ್ಬಂದಿ ಮೂಲಕ ಹಾಗೂ ಬೀಟ್‌ಗ್ರೂಪ್ ಸದಸ್ಯರ ಮೂಲಕ ಮಾನವ ಕಳ್ಳಸಾಗಾಣಿಕೆ ಬಗ್ಗೆ ಸಂಬಂಧಿಸಿದಂತೆ ಮುಂಚಿತವಾಗಿ ಮಾಹಿತಿ ಸಂಗ್ರಹಿಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಕೊಳ್ಳುವ ವ್ಯವಸ್ಥೆ ಮಾಡಲಾಗಿದೆ
ಇಷ್ಟಾದರೂ ಈ ಹಿಂದಿನ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷ ಕೇವಲ ೬ ತಿಂಗಳಿನಲ್ಲಿಯೇ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಕ್ಕಳ ಅಪಹರಣ ಪ್ರಕರಣಗಳು ದಾಖಲಾಗಿರುವುದು ಪ್ರಜ್ಞಾವಂತರನ್ನು ಚಿಂತಿಸುವಂತೆ ಮಾಡಿದೆ. ಅದರಲ್ಲೂ ಒಂದು ಪ್ರಕರಣ ಹೊರತುಪಡಿಸಿ ಬಾಲಕಿಯರ ಅಪಹರಣ ಪ್ರಕರಣಗಳು ಹೆಚ್ಚು ದಾಖಲಾಗಿರುವುದು ಆತಂಕ ಸೃಷ್ಟಿಸಿದೆ. ದೊಡ್ಡ ನಗರಗಳಲ್ಲಿ ಇರುವಂತೆ ಕೊಡಗಿನಲ್ಲೂ ಮಕ್ಕಳ ಕಳ್ಳ ಸಾಗಾಣಿಕೆ ಜಾಲ ಸದ್ದಿಲ್ಲದೆ ಕೆಲಸ ಮಾಡುತ್ತಿದೆಯೇ ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ ಕೊಟ್ಟಿರುವ ಮಾಹಿತಿ ಪ್ರಕಾರ ಕೊಡಗಿನಲ್ಲಿ ೨೦೧೮ರಲ್ಲಿ ೧ ಬಾಲಕ ಮತ್ತು ೭ ಬಾಲಕಿಯರ ಪ್ರತ್ಯೇಕ ನಾಪತ್ತೆ ಪ್ರಕರಣ ದಾಖಲಾಗಿತ್ತು. ಎಲ್ಲರನ್ನೂ ಪತ್ತೆಹಚ್ಚುವಲ್ಲಿ ಪೊಲೀಸರು ಸಫಲರಾಗಿದ್ದರು. ೨೦೧೯ರಲ್ಲಿ ಒಬ್ಬ ಬಾಲಕಿ ನಾಪತ್ತೆ ಪ್ರಕರಣ ವರದಿಯಾಗಿತ್ತು. ಈ ಪ್ರಕರಣವನ್ನು ಪೊಲೀಸರು ಭೇದಿಸಿದ್ದರು. ೨೦೨೦, ೨೦೨೧ ಹಾಗೂ ೨೦೨೨ರಲ್ಲಿ ಯಾವುದೇ ಪ್ರಕರಣ ನಡೆದಿರಲಿಲ್ಲ. ೨೦೨೩ರ ಜೂ.೧೫ರ ತನಕ ಒಬ್ಬ ಬಾಲಕಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಆಕೆಯನ್ನು ಪತ್ತೆಹಚ್ಚಲಾಗಿದೆ.
ಮಕ್ಕಳ ಅಪಹರಣ ಮತ್ತು ನಾಪತ್ತೆ ಪ್ರಕರಣಗಳಿಗೆ ಕಡಿವಾಣ ಹಾಕಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ. ರಾಜ್ಯದಲ್ಲಿ ಮಾನವ ಕಳ್ಳಸಾಗಾಣಿಕೆಯನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಸರ್ಕಾರ ನಿರ್ಭಯ ನಿಧಿ ಅಡಿಯಲ್ಲಿ ೩೫ ಮಾನವ ಕಳ್ಳ ಸಾಗಾಣಿಕೆ ನಿಷೇಧ ಘಟಕಗಳನ್ನು ಸ್ಥಾಪಿಸಿದೆ. ಪ್ರತಿ ಮಾನವ ಕಳ್ಳಸಾಗಾಣಿಕೆ ಘಟಕಗಳಿಗೆ ಹಿರಿಯ ಮತ್ತು ಕಿರಿಯ ಮಕ್ಕಳ ಕಲ್ಯಾಣಾಧಿಕಾರಿಗಳನ್ನು ನಿಯೋಜಿಸಿ, ಅವರುಗಳಗೆ ತರಬೇತಿ ನೀಡಲಾಗಿದೆ. ಮಾನವ ಸಾಗಾಣಿಕೆ ಮಾಡುವವರ ವಿರುದ್ಧ ಮಾಹಿತಿ ಸಂಗ್ರಹಿಸಿ ತಪ್ಪಿತಸ್ಥರ ಮೇಲೆ ಕಲಂ.೩೭೦, ೩೭೦[ಎ] ಐಪಿಸಿ ಮತ್ತು ಇಮ್‌ಮೋರಲ್ ಟ್ರಾಫಿಕಿಂಗ್ ಪ್ರಿವೆನ್ಸ್ ಆಕ್ಟ್ (ಐ.ಟಿ.ಪಿ.ಎ) ಹಾಗೂ ಸಂಬಂಧಪಟ್ಟ ಇತರ ಕಾಯ್ದೆ ಮತ್ತು ಕಲಂ ರೀತಿ ಪ್ರಕರಣಗಳನ್ನು ದಾಖಲಿಸಿ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತಿದೆ.