ಜಿಲ್ಲೆ

ಆರಂಭದ ಸಾವಿರ ದಿನ ಮಗು ಬೆಳವಣಿಗೆಯ ಮಹತ್ವದ ಘಟ್ಟ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ನವಜಾತ ಶಿಶುಗಳ ಜನನದ ನಂತರದ ಕಠಿಣ ಸಂದರ್ಭಗಳಿಂದ ಹಿಡಿದು, ಆರಂಭದ ಸಾವಿರ ದಿನಗಳು ಮಗುವಿನ ಭೌತಿಕ ಹಾಗೂ ಬೌದ್ಧಿಕ ಬೆಳವಣಿಗೆಯ ವೃದ್ಧಿಗೆ ಮಹತ್ವದ ಘಟ್ಟ ಎಂದು ಹೊಸದಿಲ್ಲಿಯ ಐಸಿಎಂಆರ್ ಹೆರಿಗೆ ವಿಭಾಗದ ಮುಖ್ಯಸ್ಥೆ ಡಾ. ಅಶೂ ಗ್ರೋವರ್ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್), ಕರ್ನಾಟಕ ಆರೋಗ್ಯ ಸಂವರ್ಧನ ಟ್ರಸ್ಟ್ (ಕೆಎಚ್‌ಪಿಟಿ) ಹಾಗೂ ಸೆಂಟ್ ಜಾನ್ಸ್ ಸಂಶೋಧನಾ ಸಂಸ್ಥೆ(ಎಸ್‌ಜೆಆರ್‌ಐ) ವತಿಯಿಂದ ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಿಶುವಿನ ಬೆಳವಣಿಗೆಯ ಆರಂಭದ ಸಾವಿರ ದಿನಗಳ ಕುರಿತ ‘ಸ್ಪರ್ಶ್-ದಿ ಫಸ್ಟ್ 1000 ಡೇಸ್ ಆಫ್ ಲೈಫ್’ ಎನ್ನುವ ಸಂಶೋಧನಾ ಯೋಜನೆಗೆ ಐದು ತಿಂಗಳ ಹಿಂದೆ ಚಿತ್ರದುರ್ಗ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ. ಐಸಿಎಂಆರ್ ಸಂಶೋಧನಾ ಕೇಂದ್ರದಿಂದ ‘ಸ್ಪ ರ್ಶ್-ದಿ ಫಸ್ಟ್ 1000 ಡೇಸ್ ಆಫ್ ಲೈಫ್ ಯೋಜನೆ ಅನುಷ್ಠಾನದ ಬಗ್ಗೆ ಕೂಲಂಕೂಷವಾಗಿ ಮಾದರಿ ಅಧ್ಯಯನ ನಡೆಸಲಾಗುತ್ತಿದೆ. ಜನನದಿಂದ ಸಾವಿರ ದಿನಗಳವರೆಗೆ ಮಗುವಿನ ಆರೋಗ್ಯ ವೃದ್ಧಿಗೆ ಹಲವು ರೀತಿಯ ಕಾರ್ಯತಂತ್ರಗಳನ್ನು ರೂಪಿಸಲಾಗಿದೆ. ದೇಶದಾದ್ಯಂತ ಯೋಜನೆ ಅನುಷ್ಠಾನಕ್ಕಾಗಿ ರಾಜ್ಯಮಟ್ಟದ ಹಾಗೂ ಸ್ಥಳೀಯ ಆರೋಗ್ಯ ಸಂಸ್ಥೆಗಳ ಜತೆ ಕೈ ಜೋಡಿಸಲಾಗಿದೆ. ಆಯುಷ್ಮಾನ್ ಭಾರತ ಯೋಜನೆಯಡಿ ಜಿಲ್ಲಾಸ್ಪತ್ರೆಗಳು ಉತ್ತಮ ಸೌಲಭ್ಯಗಳನ್ನು ಜನರಿಗೆ ನೀಡುತ್ತಿವೆ ಎಂದು ತಿಳಿಸಿದರು.

ಹೊಸದಿಲ್ಲಿ ಅಥವಾ ಬೆಂಗಳೂರಿನಲ್ಲಿ ಕುಳಿತು ಯೋಜನೆ ರೂಪಿಸಿ, ಸುಮ್ಮನೆ ಕುಳಿತರೆ ಯಶಸ್ವಿ ಅನುಷ್ಠಾನ ಅಸಾಧ್ಯ. ಜಿಲ್ಲಾಸ್ಪತ್ರೆಗಳು ವಾಸ್ತವವಾಗಿ ಎದುರಿಸುತ್ತಿರುವ ತೊಂದರೆ, ಸವಾಲುಗಳ ಕುರಿತು ಮಾಹಿತಿ ನೀಡಬೇಕು. ಇದರಿಂದ ಅಗತ್ಯಯಂತ್ರೋಪಕರಣ, ಔಷಧ ಹಾಗೂ ಸವಲತ್ತುಗಳನ್ನು ಉನ್ನತೀಕರಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.

ಸಹಜ ಹೆರಿಗೆ, ಅವಧಿ ಮುನ್ನ ಹೆರಿಗೆ, ಕಡಿಮೆ ತೂಕ ಮಕ್ಕಳ ಜನನವಾದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕಾರ್ಯವಿಧಾನಗಳ ಬಗ್ಗೆ ಮಾರ್ಗ ಸೂಚಿಗಳನ್ನು ರಚಿಸಲಾಗಿದೆ. ಮಾದರಿ ಅಧ್ಯಯನದ ಅಂಶಗಳನ್ನು ಪರಿಗಣಿಸಿ ಹೆಚ್ಚು ಪರಿಣಾಮ ಬೀರುವ ಕಾರ್ಯತಂತ್ರಗಳನ್ನು ಐಸಿಎಂಆರ್ ರೂಪಿಸಲಿದೆ. ಇದು ದೇಶದ ಬೇರೆ ಜಿಲ್ಲೆ ಹಾಗೂ ಭಾಗಗಳ ಸಮಸ್ಯೆಗಳಿಗೂ ಪರಿಹಾರ ಒದಗಿಬಹುದಾಗಿದೆ ಎಂದು ಗ್ರೋವರ್ ಹೇಳಿದರು.

ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್ ಮಾತನಾಡಿ, ಕಡಿಮೆ ತೂಕದೊಂದಿಗೆ ಜನಿಸಿಸುವ ಶಿಶುವಿಗೆ ಈ ಯೋಜನೆಯಡಿ ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಿ ಆರೋಗ್ಯ ಸುಧಾರಿಸುವಂತೆ ಮಾಡಲಾಗಿದೆ ಎಂದರು. ಕಾರ್ಯಾಗಾರದಲ್ಲಿ ನವಜಾತ ಹಾಗೂ 2 ವರ್ಷದ ಒಳಗಿನ ಮಕ್ಕಳ ಚಿಕಿತ್ಸಾ ವಿಧಾನ ಕುರಿತು ವೈದ್ಯರಿಗೆ ತರಬೇತಿ ನೀಡಲಾಯಿತು.

ಐಸಿಎಂಆರ್‌ನ ಡಾ. ಆಮ್ಲಿನ್ ಶುಕ್ಲಾ, ಕೆಎಚ್‌ಟಿಪಿ ಯೋಜನಾ ಮುಖ್ಯಸ್ಥೆ ಡಾ. ಪ್ರಾರ್ಥನಾ, ಹಿರಿಯ ವ್ಯವಸ್ಥಾಪಕಿ ಡಾ. ಆಯಿಷಾ, ಜಿಲ್ಲಾ ಆರ್‌ಸಿಎಚ್‌ಒ ಡಾ. ಅಭಿನವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿಜಯ್‌ಕುಮಾರ್, ಸೆಂಟ್ ಜಾನ್ಸ್ ಸಂಶೋಧನಾ ಸಂಸ್ಥೆಯ ಡಾ. ಪ್ರೇಮ್‌ಮೌನಿ, ಡಾ. ಸುಮನ್‌ರಾವ್, ಜಿಲ್ಲಾ ಸಂಯೋಜಕಿ ಬಿ. ವೀಣಾ, ತಾಲೂಕು ಸಂಯೋಜಕಿ ಮೇಘಾ ಇದ್ದರು.