ಜಿಲ್ಲೆ

ಮಕ್ಕಳ ಹವಾಮಾನ ಕ್ರಿಯಾ ಸಭೆ 7ರಂದು

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ನಗರದ ಎಲ್ಲ ಶಾಲೆಗಳು ಮತ್ತು ಪಿಯು ಕಾಲೇಜುಗಳ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ಕರೆತರುವ ಉದ್ದೇಶದಿಂದ ಗ್ರೇಟರ್​ ಬೆಂಗಳೂರು ಪ್ರಾಧಿಕಾರದ ಹವಾಮಾನ ಕ್ರಿಯಾ ಕೋಶದ (ಎಫ್​ಇಸಿಸಿ) ವತಿಯಿಂದ ನ.7ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆ ವರೆಗೆ "ಮಕ್ಕಳ ಹವಾಮಾನ ಕ್ರಿಯಾ ಸಭೆ&2025' ಅನ್ನು ನಗರದ ಟೌನ್​ ಹಾಲ್​ನಲ್ಲಿ ಆಯೋಜಿಸಲಾಗುತ್ತಿದೆ ಎಂದು ಎಫ್​ಇಸಿಸಿ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್​ ತಿಳಿಸಿದ್ದಾರೆ.

ಹವಾಮಾನ ಬದಲಾವಣೆಯನ್ನು ಎದುರಿಸಲು ಮಕ್ಕಳ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ನಮ್ಮ ನಗರದ ನಿಜವಾದ ಬಲ ಮಕ್ಕಳು ಮತ್ತು ಯುವಕರಾಗಿದ್ದಾರೆ ಎಂದು ಹೇಳಿದರು.

ಹವಾಮಾನ ಕ್ರಿಯಾ ಬಳಗಗಳು ಪ್ರತಿಯೊಂದು ಶಾಲೆ ಮತ್ತು ಕಾಲೇಜಿನ ಅತ್ಯಂತ ಅಮೂಲ್ಯ ವೇದಿಕೆಗಳಾಗಿವೆ. ಬೆಂಗಳೂರು ಹವಾಮಾನ ಕ್ರಿಯಾ ಯೋಜನೆಯ ಅನ್ವಯವಾಗಿ ಇಂತಹ ಕ್ಲಬ್​ಗಳನ್ನು ನಗರದ ಪ್ರತಿಯೊಂದು ಶಿಕ್ಷಣ ಸಂಸ್ಥೆಯಲ್ಲಿ ಸ್ಥಾಪಿಸುವುದು ನಮ್ಮ ದೃಢ ಗುರಿಯಾಗಿದೆ ಎಂದು ಹೇಳಿದರು.

20 ಹವಾಮಾನ ಕ್ಲಬ್​ ಆಯ್ಕೆ: ನಗರದ 85 ಶಾಲೆಗಳು ಮತ್ತು ಪಿಯು ಕಾಲೇಜುಗಳಲ್ಲಿ ಹವಾಮಾನ ಕ್ರಿಯಾ ಬಳಗಗಳನ್ನು ರಚಿಸಿ, ವಿದ್ಯಾರ್ಥಿಗಳ ಜ್ಞಾನ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಜತೆಗೆ ತಜ್ಞರ ಉಪನ್ಯಾಸ ಸರಣಿಗಳನ್ನೂ ನಡೆಸಲಾಯಿತು. ಅ.28, 29 ಮತ್ತು 30 ರಂದು ಜಿಬಿಎ ಕೇಂದ್ರ ಕಚೇರಿಯಲ್ಲಿ ಪೂರ್ವ ಆಯ್ಕೆ ಸುತ್ತುಗಳನ್ನು ನಡೆಸಲಾಯಿತು. ವಿಷಯದ ಅರಿವು, ಪಾಲ್ಗೊಳ್ಳುವಿಕೆಗೆ ತೋರಿದ ಉತ್ಸಾಹ, ವಿಮರ್ಶಾತ್ಮಕ ಚಿಂತನೆ ಮತ್ತು ವಾದ ಪ್ರಸ್ತುತಪಡಿಸುವ ಸಾಮರ್ಥ್ಯ ಸೇರಿದಂತೆ ಹಲವು ಮಾನದಂಡಗಳ ಆಧಾರದಲ್ಲಿ ತಂಡಗಳನ್ನು ಮೌಲ್ಯಮಾಪನ ಮಾಡಿ, ಪ್ರತಿ ನಗರ ಪಾಲಿಕೆಯ ನಾಲ್ಕು ಶಾಲೆ/ಕಾಲೇಜುಗಳಂತೆ ಒಟ್ಟು 20 ಹವಾಮಾನ ಕ್ಲಬ್​ಗಳನ್ನು (ಪ್ರತಿ ಲಗತ್ತಿಸಲಾಗಿದೆ) ಅಂತಿಮ ನಗರಮಟ್ಟದ ವಾದ&ಪ್ರತಿವಾದ ಸ್ಪರ್ಧೆಗೆ ಆಯ್ಕೆ ಮಾಡಲಾಗಿದೆ.