ಹಿರೀಸಾವೆ: ಶೈಕ್ಷಣಿಕ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ ಬೆಳೆಸಲು ಮಕ್ಕಳ ಸಂತೆ ಉತ್ತಮ ವೇದಿಕೆಯಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಈ.ಬೋರಣ್ಣ ಹೇಳಿದರು.
ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಗ್ರಾಮ ಪಂಚಾಯಿತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಗಣಿತ ಮೆಟ್ರಿಕ್ ಮೇಳ ಹಾಗೂ ಮಕ್ಕಳ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಗಣಿತ ವಿಷಯ ಕಠಿಣವಾಗಿದ್ದು ಮಕ್ಕಳಿಗೆ ಶ್ರಮ ವಹಿಸಿ ಸುಲಭವಾಗಿ ಕಲಿಸಲು ಶಿಕ್ಷಕರು ಹೆಚ್ಚು ಒತ್ತು ನೀಡಬೇಕು ಎಂದರು.
ಗಣಿತ ಮೆಟ್ರಿಕ್ ಮೇಳ ಹಾಗೂ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಕ್ಲಸ್ಟರ್ ವ್ಯಾಪ್ತಿಯ 7 ಶಾಲೆಗಳಿಂದ ಸುಮಾರು 250 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗಣಿತ ಮೆಟ್ರಿಕ್ ಮೇಳದಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಪ್ರಮೋದ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಹಿರಿಯಣ್ಣ, ಪಿಡಿಒ ಸತೀಶ್, ಶಾಲಾ ಮುಖ್ಯ ಶಿಕ್ಷಕಿ ಉಮಾ, ಶಿಕ್ಷಕರಾದ ಧರ್ಮೇಶ್, ದೇವರಾಜ್, ವಿನಯ್ ಎಂ.ಗುನಗಾ, ಎನ್.ಜಿ.ಶೋಭಾ, ಗೌರಮ್ಮ, ದೇವಕ್ಕಿ, ಆರ್.ಶೋಭಾ, ಮಂಜುನಾಥ್, ಪಾಲಕರು ಇದ್ದರು.