ಗುಂಡ್ಲುಪೇಟೆ: ಪೌಷ್ಟಿಕ ಆಹಾರ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎಂದು ಶಾಸಕ ಎಚ್.ಎಂ.ಗಣೇಶ ಪ್ರಸಾದ್ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪಟ್ಟಣದ ಲ್ಯಾಂಪ್ಸ್ ಸೊಸೈಟಿ ಸಾಂಸ್ಕೃತಿಕ ಭವನದಲ್ಲಿ ಸೋಮವಾರ ಆಯೋಜಿಸಿದ್ದ 7ನೇ ವರ್ಷದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಪೌಷ್ಟಿಕ, ಸಮತೋಲನ ಆಹಾರ ಸೇವನೆಯಿಂದ ಗರ್ಭಿಣಿ, ಬಾಣಂತಿಯರು, ಮಗು ಆರೋಗ್ಯವಂತರಾಗಿರಲು ಸಾಧ್ಯ. ಮಕ್ಕಳು ದೇಶದ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರವಹಿಸುತ್ತಾರೆ. ಸರ್ಕಾರ ಮಕ್ಕಳ ಆರೋಗ್ಯ ದೃಷ್ಟಿಯ ಮೇರೆಗೆ ಅಂಗನವಾಡಿ ಕೇಂದ್ರಗಳಲ್ಲಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಹಣ್ಣು, ಮೊಟ್ಟೆ, ಹಾಲು ವಿತರಣೆ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ತಲುಪಬೇಕು ಎಂದರು.
ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೇಮಾವತಿ ಮಾತನಾಡಿ, ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳಿಗೆ ಪೌಷ್ಟಿಕತೆ ಕೊರತೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಪೋಷಣ್ ಮಾಸಾಚರಣೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಮತ್ತು 6 ವರ್ಷದೊಳಗಿನ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಕಾರ್ಯಕ್ರಮವಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾ ಅಧ್ಯಕ್ಷೆ ಸರಸ್ವತಿ, ಕರ್ನಾಟಕ ರಾಜ್ಯ ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಆಲತ್ತೂರು ಜಯರಾಂ, ಆಯುಷ್ ಇಲಾಖೆ ವೈದ್ಯ ಡಾ.ಗುರುಪ್ರಸಾದ್, ಬೊಮ್ಮನಹಳ್ಳಿ, ತೆರಕಣಾಂಬಿ ಮತ್ತು ಕಸಬಾ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.