ಜಿಲ್ಲೆ

ಮಕ್ಕಳ ರೇನಿ ಡೇ ಸಂಭ್ರಮ

ಉತ್ತರ ಕನ್ನಡ ಡೆಸ್ಕ್

ಕುಮಟಾ: ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟ್‌ನ ಸರಸ್ವತಿ ವಿದ್ಯಾಮಂದಿರದಲ್ಲಿ ಬಣ್ಣ ಬಣ್ಣದ ಬಟ್ಟೆ ತೊಟ್ಟ ಮಕ್ಕಳು ರಂಗುರಂಗಿನ ಕೊಡೆ ತಿರುಗಿಸುತ್ತ ಮುಂಗಾರು ಮಳೆಯಲ್ಲಿ ನರ್ತಿಸುತ್ತ ಮಳೆ ನೀರಿನಲ್ಲಿ ಕಾಗದದ ದೋಣಿ ತಯಾರಿಸಿ ಬಿಟ್ಟು ಸಂತಸಪಟ್ಟರು.

ಮಳೆಗಾಲದ ನೈಜ ಅನುಭವದ ಜತೆಗೆ ಮನರಂಜನೆಯ ಮೂಲಕ ಕಲಿಕೆಯ ತರಗತಿಯನ್ನು ಶನಿವಾರದ ಬ್ಯಾಗ್ ಲೆಸ್ ಡೇ ದಿನ, ರೇನಿ ಡೇ ಹಮ್ಮಿಕೊಂಡಿದ್ದು ಗಮನ ಸೆಳೆಯಿತು. ಮಳೆಯಲ್ಲಿ ಮಕ್ಕಳೊಂದಿಗೆ ಶಿಕ್ಷಕರೂ ಸಂಭ್ರಮಿಸಿದರು. ಮಳೆ ಹಾಡಿಗೆ ಪುಟಾಣಿ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.

ಪರಿಸರದ ನೈಸರ್ಗಿಕ ವ್ಯವಸ್ಥೆಯ ಬಗ್ಗೆ ತಿಳಿಸುವ, ಮಾನವನ ಬದುಕಿಗೆ ಅಗತ್ಯವಾದ ಜಲಚಕ್ರದ ಮೂಲಭೂತ ಕಲ್ಪನೆಯ ಬಗ್ಗೆ ತಿಳಿಸಿಕೊಡಲಾಯಿತು. ನೀರಿನ ಮೂಲಗಳು, ನೀರು ಆವಿಯಾಗಿ ಘನೀಕರಿಸಿ ಮೋಡವಾಗುವ ವ್ಯವಸ್ಥೆ. ತಂಪು ತಗುಲಿದಾಗ ಮೋಡವು ಮಳೆಯಾಗಿ ಸುರಿದು ಮತ್ತೆ ನೀರಾಗಿ ಭೂಮಿಯನ್ನು ತಲುಪುವುದು. ಈ ಎಲ್ಲ ವಿಚಾರಗಳ ಬಗ್ಗೆ ಶಿಕ್ಷಕ ಗಣೇಶ ಜೋಶಿ ವಿವರಣೆ ನೀಡಿದರು. ಪ್ರೊಜೆಕ್ಟರ್ ಮೂಲಕ ಚಿತ್ರವನ್ನು ವೀಕ್ಷಿಸಿದ ವಿದ್ಯಾರ್ಥಿಗಳು ತಾವು ಕಲಿತ ವಿಚಾರವನ್ನು ವೇದಿಕೆಗೆ ಬಂದು ತಮ್ಮದೇ ಶೈಲಿಯಲ್ಲಿ ಅಭಿವ್ಯಕ್ತ ಪಡಿಸಿದರು.