ಮಂಡ್ಯ: ಮಾನವನ ಜ್ಞಾನ, ಅರಿವು ಸುಖ-ದುಃಖಗಳನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಸಾಗಿಸುವ ಅತ್ಯಂತ ಪ್ರಮುಖ ಮಾರ್ಗ ಸಾಹಿತ್ಯ. ಆದ್ದರಿಂದ ಸಾಹಿತ್ಯದ ರುಚಿಯನ್ನು ಮಕ್ಕಳಿಗೆ ಬೆಳೆಸುವ ಕೆಲಸವಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಸಲಹೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಸಂಭ್ರಮ ಸಾಹಿತ್ಯ ಕ್ರೂಢೀಕರಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ತಮ್ಮ ಸಣ್ಣ ವಯಸ್ಸಿನಿಂದಲೇ ಅವರ ಅಭಿವ್ಯಕ್ತಿಯನ್ನು ಹೊರ ಹಾಕುವ ವಿವಿಧ ಪ್ರಕಾರಗಳನ್ನು ಪರಿಚಯ ಮಾಡಿಕೊಟ್ಟರೆ ಮುಂದಿನ ದಿನಗಳಲ್ಲಿ ಅವರು ಹೆಚ್ಚಿನ ಪ್ರಪಂಚ ಜ್ಞಾನವನ್ನು ಪಡೆಯಲು ಸಾಧ್ಯವಾಗುತ್ತದೆ. ಅಂತಹ ಒಂದು ಪ್ರಯತ್ನ ಈ ಕಾರ್ಯಕ್ರಮದಲ್ಲಿ ಅಡಗಿದೆ. ಇಂದಿನ ಕಾರ್ಯಾಗಾರದಲ್ಲಿ ಮಕ್ಕಳು ಬರೆದ ಕಥೆ, ಕವನ, ನಾಟಕಗಳನ್ನು ಕ್ರೂಡೀಕರಣ ಮಾಡಿ ಅತ್ಯುತ್ತಮವಾದವುಗಳನ್ನು ರಾಜ್ಯ ಹಂತಕ್ಕೆ ಕಳಿಸುವ ಕಾರ್ಯ ನಡೆಯಲಿದೆ. ಜಿಲ್ಲೆಯ ಮಕ್ಕಳು ಬರೆದ ಸಾಹಿತ್ಯ ರಾಜ್ಯಮಟ್ಟದಲ್ಲಿ ಹೆಚ್ಚಾಗಿ ಆಯ್ಕೆಯಾಗಲೆಂದು ಹಾರೈಸಿದರು.
ಪ್ರಾಸ್ತ್ತಾವಿಕ ನುಡಿಗಳನ್ನಾಡಿದ ಸಮಿತಿಯ ರಾಜ್ಯ ಸಂಚಾಲಕ ಟಿ.ಎ.ಪ್ರಶಾಂತ್‌ಬಾಬು, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಲ್ಲಿ ಮಕ್ಕಳಿಗೆ ಸ್ಪಂದಿಸುವ ಸ್ಥಳೀಯ ಆಡಳಿತ ಎಂಬ ಯೋಜನೆ ಅಡಿಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಹಯೋಗದೊಂದಿಗೆ ಜಿಲ್ಲೆಯ ಐದು ತಾಲೂಕಿನಲ್ಲಿ ಮಕ್ಕಳ ಸಾಹಿತ್ಯ ಸಂಭ್ರಮ ಹಬ್ಬವನ್ನು ನಡೆಸಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, 2000ಕ್ಕೂ ಹೆಚ್ಚು ಪುಟಗಳ ನವೀನ ಸಾಹಿತ್ಯವನ್ನು ಸೃಜನೆ ಮಾಡಿರುತ್ತಾರೆ. ಈ ಸಾಹಿತ್ಯದ ಕ್ರೂಢೀಕರಣ ಹಾಗೂ ರಾಜ್ಯಮಟ್ಟದ ಪುಸ್ತಕ ಪ್ರಕಟಣೆಗೆ ಸಾಹಿತ್ಯದ ಆಯ್ಕೆಗಾಗಿ ಈ ಒಂದು ಕ್ರೂಢೀಕರಣ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದು ಹೇಳಿದರು.
ಸಮಿತಿಯ ಜಿಲ್ಲಾಧ್ಯಕ್ಷ ಪ್ರೊ.ಎಸ್.ರೇವಣ್ಣ ಮಾತನಾಡಿ, ಸಾಹಿತ್ಯ ಸಂಭ್ರಮ ಮಕ್ಕಳಿಂದಲೇ ಲೇಖನಗಳನ್ನು ಬರೆಸುವ ಅತ್ಯಂತ ನವೀನ ಚಟುವಟಿಕೆಯಾಗಿದೆ. ಮಕ್ಕಳಲ್ಲಿ ಅಭಿವ್ಯಕ್ತಿ ಸಾಮರ್ಥ್ಯವನ್ನು ಹೆಚ್ಚಿಸಲು ಇದು ಸಹಕಾರಿಯಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಮಳವಳ್ಳಿ, ಶ್ರೀರಂಗಪಟ್ಟಣ, ಮದ್ದೂರು, ಮಂಡ್ಯ ಮತ್ತು ಪಾಂಡವಪುರ ತಾಲೂಕಿನ ಆಯ್ದ 15 ಪಂಚಾಯಿತಿಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು.
ಜಿಪಂ ಮುಖ್ಯ ಯೋಜನಾಧಿಕಾರಿ ಎಸ್.ಧನುಷ್, ಯೋಜನಾ ಅಂದಾಜು ಮೌಲ್ಯ ಮಾಪನಾಧಿಕಾರಿ ಎಂ.ಶಿವಮ್ಮ, ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ನಂಜರಾಜು ಹಾಗೂ ವಿವಿಧ ತಾಲೂಕುಗಳಿಂದ ಆಗಮಿಸಿದ್ದ 30 ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.