ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ಎಜ್ಯುಕೇಶನ್ ಬೋರ್ಡ್, ಕೆ.ಇ. ಬೋರ್ಡ ಪದವಿ ಮತ್ತು ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಇಲ್ಲಿನ ಶಿವಾಜಿ ವೃತ್ತ ಬಳಿಯ ಕೆ.ಇ. ಬೋರ್ಡ ಕಾಲೇಜು ಆವರಣದಲ್ಲಿ ಡಿ. 7ರಂದು ಬೆಳಗ್ಗೆ 8.30ಕ್ಕೆ ಮಕ್ಕಳ ಸಾಹಿತ್ಯ ಸಮ್ಮೇಳನ (ಜಾನಪದ ಸಾಹಿತ್ಯ) ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ.ಎ. ಸಿದ್ದಾಂತಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಇ. ಬೋರ್ಡ ಅಧ್ಯಕ್ಷ ಡಾ. ಎಂ.ಎನ್. ಜೋಶಿ ಸಮ್ಮೇಳನ ಉದ್ಘಾಟಿಸುವರು. ಅತಿಥಿಗಳಾಗಿ ಕೆ.ಇ. ಬೋರ್ಡ ಕಾರ್ಯದರ್ಶಿ ಡಿ.ಎಸ್. ರಾಜಪುರೋಹಿತ, ಎನ್.ಎಸ್. ಕುಲಕರ್ಣಿ ಆಗಮಿಸುವರು. ಸಮ್ಮೇಳನ ಅಧ್ಯಕ್ಷ ಡಾ. ಕೆ.ಆರ್. ದುರ್ಗಾದಾಸ, ಸುನೀತ ಪುರೋಹಿತ ಉಪಸ್ಥಿತರಿರುವರು. ಕೆ.ಇ. ಬೋರ್ಡ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಬೆಳಗ್ಗೆ 11 ಗಂಟೆಯಿಂದ ನಡೆಯಲಿರುವ ಗೋಷ್ಠಿಯಲ್ಲಿ ಜನಪದ ಸಾಹಿತ್ಯದಲ್ಲಿ ಕೃಷಿ, ಕನ್ನಡ ಸಾಹಿತ್ಯದಲ್ಲಿ ಜಾನಪದ ಕಲ್ಪನೆ, ಜನಪದ ಸಾಹಿತ್ಯ ಮತ್ತು ಯಕ್ಷಗಾನ, ಜನಪದ ತ್ರಿಪದಿಗಳಲ್ಲಿ ಜೀವನ ಮೌಲ್ಯ, ಹಳ್ಳಿ ಹಾಡುಗಳಲ್ಲಿ ದೇಶಾಭಿಮಾನ, ಜನಪದ ಸಾಹಿತ್ಯದಲ್ಲಿ ಮಾತೃ ವಾತ್ಸಲ್ಯ, ಜನಪದ ಸಾಹಿತ್ಯ ಮತ್ತು ಬಯಲಾಟ ಕುರಿತು ವಿದ್ಯಾರ್ಥಿಗಳು ವಿಷಯ ಮಂಡಿಸಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಡಾ. ವೀರಣ್ಣ ರಾಜೂರ ಅತಿಥಿಯಾಗಿ ಆಗಮಿಸುವರು. ಶ್ರೀಕಾಂತ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ವಿದ್ಯಾರ್ಥಿಗಳು ಜನಪದ ನೃತ್ಯ, ಗೀತೆ ಸೇರಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಸಂಸ್ಥೆಯ ವಿವಿಧ ಶಾಲೆ-ಕಾಲೇಜುಗಳಿಂದ ಸುಮಾರು 1200 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.
ಶ್ರೀಕಾಂತ ಪಾಟೀಲ, ಡಿ.ಎಸ್.ರಾಜಪುರೋಹಿತ, ಡಾ. ಶರಣಮ್ಮ ಗೋರೆಬಾಳ, ಎನ್.ಎಸ್. ಕುಲಕರ್ಣಿ, ಇತರರು ಇದ್ದರು.