ಸೋಮವಾರಪೇಟೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಭಾರತ ಜ್ಞಾನ, ವಿಜ್ಞಾನ ಸಮಿತಿ ವತಿಯಿಂದ ಪಟ್ಟಣದ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಿರುವ ‘ಮಕ್ಕಳ ಸಾಹಿತ್ಯ ಸಂಭ್ರಮ’ 2ನೇ ಕಾರ್ಯಕ್ರಮದಲ್ಲಿ ಮಂಗಳವಾರ ಮಕ್ಕಳು ತಮ್ಮಲ್ಲಿ ಆಡಗಿರುವ ಕಲಾಪ್ರತಿಭೆಯನ್ನು ಪ್ರದರ್ಶಿಸಿ ಸಂಭ್ರಮಿಸಿದರು.
ಒಟ್ಟು 100 ಮಕ್ಕಳು ನಾಲ್ಕು ವಿಭಾಗಗಳಲ್ಲಿ ತಮಗೆ ನೀಡಿದ ಟಾಸ್ಕ್‌ಗಳನ್ನು ಅಂಜಿಕೆ, ಭಯವಿಲ್ಲದೆ ನಿರ್ವಹಿಸಿದರು. ಕೆಲ ಮಕ್ಕಳು ಕವನ, ಕಥೆ ಬರೆದರು. ನಾಟಕದ ಡೈಲಾಗ್ ತಾವೇ ಬರೆದು ಅಭಿನಯಿಸಿ ತೀರ್ಪುಗಾರರ ಮನ ಗೆದ್ದರು. ನಾನು ರಿಪೋರ್ಟರ್ ವಿಭಾಗದ ಮಕ್ಕಳು ಪತ್ರಿಕಾಭವನಕ್ಕೆ ತೆರಳಿ ಅಲ್ಲಿನ ಪತ್ರಕರ್ತರಿಂದ ಪತ್ರಿಕೋದ್ಯಮದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ತಾವೇ ನಿಂತು ಪತ್ರಕರ್ತರನ್ನೇ ಸಂದರ್ಶಿಸಿದರು.
ನಾಟಕದ ವಿಭಾಗದಲ್ಲಿ ‘ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲ ಬಿದ್ದಂತೆ’, ಬಾಲ್ಯವಿವಾಹ, ನಾಯಿಯ ರೋದನೆ ಎಂಬ ಶೀರ್ಷಿಕೆ ಕೊಟ್ಟು ತಾವೇ ರಚಿಸಿ ಅಭಿನಯಿಸಿದರು. ಕಥೆ ವಿಭಾಗದ ಮಕ್ಕಳು ಚಿತ್ರ ನೋಡಿ ಕಥೆ ಬರೆಯುವುದು, ಕಥೆಗೊಂದು ಸಾಲು, ಪದ ಆಧರಿಸಿ ಕಥೆ ರಚಿಸುವ, ಮಕ್ಕಳ ಬದುಕಿನ ಘಟನೆ ಆಧಾರಿತ ಕಥಾ ರಚನೆ, ಕಡ್ಡಿಗೊಂಬೆ ಮೂಲಕ ಕಥೆ ಕಟ್ಟುವುದು ಹೀಗೆ ಹಲವು ಬಗೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಕವಿತೆ ವಿಭಾಗದಲ್ಲಿ ಪ್ರಾಸ ಪದ ಬಳಸಿ ಕವಿತೆ, ಚಿತ್ರ ಬಳಸಿ ಕವಿತೆ, ಸಾಲಿಗೆ ಸಾಲು ಕವಿತೆ, ನಮ್ಮನೆ ಹಾಡು ಹೀಗೆ ಅನೇಕ ಮಾದರಿಯಲ್ಲಿ ಕವನ ಕಟ್ಟಿದರು. ‘‘ಸುಂದರವಾದ ಕಮಲದ ಹೂವುಗಳು ನೀರಿನಲ್ಲಿ ತೇಲುತ್ತಿತ್ತು ಬಾತು ಕೋಳಿಗಳು, ಆಕಾಶದಲ್ಲಿ ಹಾರಾಡುವ ಹಕ್ಕಿ, ನನ್ನ ಗೆಳತಿಯ ಮುಖದ ಮೇಲಿದೆ ಚುಕ್ಕಿ’’ ,‘‘ ನನ್ನ ಹೆಸರು ಮಳೆ, ನಾನಿದ್ದರೆ ಬೆಳೆ, ರೈತನು ಕೀಳುವನು ಕಳೆ, ಇದು ನಾನು ಬರೆದ ಹಾಳೆ’’ ಸಾಲುಗಳನ್ನು ರಚಿಸಿ ಗಮನ ಸೆಳೆದರು.
ಸಾಹಿತಿಯಾದ ನ.ಲ. ವಿಜಯ ಅವರು ತಮ್ಮ ವೆಲ್ಡಿಂಗ್ ಶಾಪ್‌ಗೆ ಬಂದ ಶಿಬಿರಾರ್ಥಿಗಳಿಗೆ ಸ್ವಯಂ ಉದ್ಯೋಗದ ಮಾಹಿತಿ ನೀಡಿದರು. ತಂತ್ರಜ್ಞಾನ ಉಪಯೋಗಿಸಿಕೊಂಡು ದುಡಿದು ಹಣ ಸಂಪಾದಿಸುವ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು. ಅಂಧ ದಂಪತಿ ರೂಪಾ- ಪರಮೇಶ್ ಹಾಗೂ ವಕೀಲರಾದ ಬಿ.ಜೆ ದೀಪಕ್ ಅವರ ಸಂದರ್ಶನ ಮಾಡಿ ಮಾಹಿತಿ ಪಡೆದರು. ಪುಸ್ತಕ ಓದು ವಿಭಾಗದ ಮಕ್ಕಳು ವಿವಿಧ ಪುಸ್ತಕಗಳನ್ನು ಓದಿ ಅದರ ಕುರಿತ ಚಿಕ್ಕ ಪುಸ್ತಕ ರಚನೆ ಮಾಡಿದರು.
ಬುಧವಾರ ಸಮಾರೋಪ ಸಮಾರಂಭ ಜರುಗಲಿದೆ. ಜಿಲ್ಲಾ ಸಂಯೋಜಕಿ ಸುಮನಾ ಮ್ಯಾಥ್ಯೂ, ಸಹ ಸಂಪನ್ಮೂಲ ವ್ಯಕ್ತಿಗಳಾದ ಎಸ್.ಎಂ.ಆಶಾ, ಎಸ್.ಎಂ.ಗೀತಾಂಜಲಿ, ಜಿ.ಪಿ.ಚೇತನ್, ಕೆ.ಎನ್.ಸತೀಶ್, ಎ.ಎಚ್.ಸುಜಾತಾ, ಬಿ.ಎಸ್.ಶೋಭಾ ಮತ್ತಿತರು ಕಾರ್ಯನಿರ್ವಹಿಸಿದರು.