ಜಿಲ್ಲೆ

ಗುಂಜೇವು ಶಾಲೆಯಲ್ಲಿ ಮಕ್ಕಳ ಸಂತೆ

ಹೊಳೆನರಸೀಪುರ: ತಾಲೂಕಿನ ಗುಂಜೇವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಮಕ್ಕಳ ಸಂತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿಗಳು ವಿವಿಧ ರೀತಿಯ ತರಕಾರಿ, ಹಣ್ಣು ಹಾಗೂ ಉತ್ಪನ್ನಗಳನ್ನು ಮಾರಾಟ ಮಾಡಿ ವ್ಯಾವಹಾರಿಕ ಜ್ಞಾನ ಗಳಿಸಿಕೊಂಡರು. ಶಿಕ್ಷಕರು, ಮಕ್ಕಳಿಗೆ ತರಕಾರಿಗಳ ಹೆಸರನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪರಿಚಯಿಸಲು ತಿಳಿಸಿ, ತರಕಾರಿ ಪ್ರಮಾಣ, ತಾಜಾತನ, ಬೆಲೆ, ಜೋಡಣೆ ಆಧರಿಸಿ ತೀರ್ಪು ನೀಡಿದರು.

7ನೇ ತರಗತಿಯ ಜಿ.ಆರ್.ಗುರುಪ್ರಸಾದ್ ಪ್ರಥಮ ಸ್ಥಾನ, 5ನೇ ತರಗತಿಯ ಜಿ.ಬಿ.ಸೋಮಶೇಖರ್ ದ್ವಿತೀಯ, 1ನೇ ತರಗತಿಯ ಸಾಕ್ಷಿತ್ ಗೌಡ ತೃತೀಯ ಸ್ಥಾನ ಪಡೆದು ಕೊಂಡರು. ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು. ಇದರಲ್ಲಿ 5ನೇ ತರಗತಿಯ ಜಿ.ಎಂ.ತನ್ವಿಕಾ ಪ್ರಥಮ, 7ನೇ ತರಗತಿಯ ಜಿ.ಆರ್.ಗುರುಪ್ರಸಾದ್ ದ್ವಿತೀಯ, ಮತ್ತು 4ನೇ ತರಗತಿಯ ಜಿ.ಪಿ.ಪ್ರತೀಕ್ ತೃತೀಯ ಸ್ಥಾನ ಪಡೆದು ಕೊಂಡರು.

ಮುಖ್ಯ ಶಿಕ್ಷಕ ಆನಂದ್, ಎಸ್‌ಡಿಎಂಸಿ ಅಧ್ಯಕ್ಷ ಜಿ.ಕೆ. ರಮೇಶ್, ಸಿಆರ್‌ಪಿ ಪದ್ಮಜಾ ಹಾಗೂ ಸಿಬ್ಬಂದಿ ಇದ್ದರು.