ಮುತ್ತೂರು ಗ್ರಾಮದ ಶ್ರೀ ಮಂಜುನಾಥೇಶ್ವರ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮವನ್ನು ಕೆ.ಸಿ.ಜಯಕುಮಾರ್ ಉದ್ಘಾಟಿಸಿದರು. ದಮಯಂತಿ ಚೌಡಯ್ಯ, ಸುರೇಶ, ಸುಶೀಲ, ಮಹೇಶ್ ಇದ್ದರು. 
ಜಿಲ್ಲೆ

ವ್ಯವಹಾರಿಕ ಜ್ಞಾನ ಬೆಳೆಯಲು ಮಕ್ಕಳ ಸಂತೆ ಸಹಕಾರಿ

ಅಭಿನಯ್ ಎಚ್.ಎಂ

ಪಿರಿಯಾಪಟ್ಟಣ: ಶಿಕ್ಷಣದೊಂದಿಗೆ ವ್ಯವಹಾರಿಕ ಜ್ಞಾನ ಬೆಳೆಯಲು ಮಕ್ಕಳ ಸಂತೆ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಸಿ.ಜಯಕುಮಾರ್ ಹೇಳಿದರು.

ತಾಲೂಕಿನ ಮುತ್ತೂರು ಗ್ರಾಮದ ಶ್ರೀ ಮಂಜುನಾಥೇಶ್ವರ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳನ್ನು ನಾಲ್ಕು ಗೋಡೆಗಳ ನಡುವಿನ ಶೈಕ್ಷಣಿಕ ಪದ್ಧತಿಗೆ ಸೀಮಿತಗೊಳಿಸದೆ, ಹೊರ ಪ್ರಪಂಚದ ಜ್ಞಾನ ಕಲಿಸಿದಲ್ಲಿ ಮಾನಸಿಕವಾಗಿ ಸದೃಢರಾಗಲಿದ್ದಾರೆ ಎಂದರು.

ಮಕ್ಕಳಿಗೆ ಪಠ್ಯದ ಜತೆಗೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಬಾಹ್ಯ ಶಿಕ್ಷಣ ನೀಡಬೇಕು ಎನ್ನುವುದು ಸಂಸ್ಥೆಯ ಉದ್ದೇಶ. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದ್ದು, ಅದರ ಒಂದು ಭಾಗವೇ ಮಕ್ಕಳ ಸಂತೆಯಾಗಿದೆ ಎಂದು ಹೇಳಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ವಿಭಾಗಗಳಲ್ಲೂ ಮಕ್ಕಳನ್ನು ಸಜ್ಜುಗೊಳಿಸುವ ಅಗತ್ಯವಿದೆ. ಕಾಡಂಚಿನ ಗ್ರಾಮದಲ್ಲಿರುವ ಈ ಶಾಲೆಗೆ 25 ವರ್ಷಕ್ಕೂ ಹೆಚ್ಚಿನ ಇತಿಹಾಸವಿದ್ದು ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಅಂಗಡಿ ಹಾಕಿಕೊಂಡು ಮಾರಾಟ ಮಾಡುತ್ತಿರುವುದು ಪ್ರಶಂಸನೀಯ ಎಂದರು.

ಶಾಲಾ ಮುಖ್ಯಸ್ಥ ದಮಯಂತಿ ಚೌಡಯ್ಯ, ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಸುಶೀಲಾ, ಮುಖ್ಯ ಶಿಕ್ಷಕ ಮಹೇಶ್ ಇತರರಿದ್ದರು.