ಅವಿನಾಶ್ ಜೈನಹಳ್ಳಿ ಮೈಸೂರು
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಜಿಲ್ಲೆಯ ಶಾಲಾ ಮಕ್ಕಳಿಗೆ ಮೈಸೂರಿನ ಪ್ರಮುಖ ಪ್ರವಾಸಿ ಸ್ಥಳಗಳನ್ನು ನೋಡುವ ಅವಕಾಶ ದೊರೆಯಲಿದೆ..!
ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ಈ ಬಾರಿ ಮಕ್ಕಳಿಗಾಗಿ ವಿಶೇಷ ರೀತಿಯ ಕಾರ್ಯಕ್ರಮ ಆಯೋಜಿಸಲು ಮುಂದಾಗಿದೆ. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ‘ಮಕ್ಕಳ ದಸರಾ’ವನ್ನು ಈ ಬಾರಿ ಹಿಂದಿನಂತೆ ಆಯೋಜಿಸಲು ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ಸಿದ್ಧತೆ ನಡೆಸುತ್ತಿದೆ.
ಮುಖ್ಯವಾಗಿ ಮಕ್ಕಳಿಗಾಗಿ ‘ಮಕ್ಕಳ ದಸರಾ ದರ್ಶನ’ ಎಂಬ ಕಾರ್ಯಕ್ರಮ ರೂಪಿಸಿದೆ. ಜಿಲ್ಲೆಯಲ್ಲಿ 7, 8 ಮತ್ತು 9 ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳನ್ನು ಕರೆತಂದು ಒಂದು ದಿನ ಮೈಸೂರಿನ ಪ್ರಮುಖ ಪ್ರವಾಸಿತಾಣಗಳನ್ನು ಪರಿಚಯಿಸುವುದು ಇದರ ಉದ್ದೇಶವಾಗಿದೆ. ಸೆ. 26ರಿಂದ ಅ.1ರವರೆಗೆ ಶಾಲಾ ಮಕ್ಕಳ ದಸರಾ ದರ್ಶನ ನಡೆಯಲಿದ್ದು, ಜಿಲ್ಲೆಯ ಎಲ್ಲ ತಾಲೂಕಿನ ಸರ್ಕಾರಿ ಶಾಲೆಯ ಪ್ರತಿಭಾವಂತ ಮಕ್ಕಳು ಭಾಗವಹಿಸಲಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 33 ಹೋಬಳಿಗಳಿದ್ದು, ಹೋಬಳಿಗೆ ಒಂದರಂತೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ಬಸ್‌ನಲ್ಲಿ 50 ಮಕ್ಕಳು, ಮೂವರು ಮಾರ್ಗದರ್ಶಕ ಶಿಕ್ಷಕರಿಗೆ ಅವಕಾಶ ನೀಡಲಾಗುತ್ತದೆ. ಪ್ರತಿ ಹೋಬಳಿಯ 50 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ‘ಮಕ್ಕಳ ದಸರಾ ದರ್ಶನ’ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗುತ್ತದೆ.
ಆ ಮಕ್ಕಳು ಒಂದು ದಿನ ಮೈಸೂರು ಅರಮನೆ, ಮೃಗಾಲಯ, ಜಗನ್ಮೋಹನ ಅರಮನೆ, ಕೆ.ಆರ್.ವೃತ್ತ, ದಸರಾ ವಸ್ತುಪ್ರದರ್ಶನ, ಆರ್‌ಎಂಎನ್‌ಎಚ್, ಪಾರಂಪರಿಕ ಇಲಾಖೆಯ ಪ್ರಾಚ್ಯಪ್ರಜ್ಞೆ-ವಸ್ತುಪ್ರದರ್ಶನ ಮುಂತಾದ ಸ್ಥಳಗಳನ್ನು ವೀಕ್ಷಣೆ ಮಾಡಲಿದ್ದಾರೆ.
ಒಂದೊಂದು ದಿನ ಒಂದು ತಾಲೂಕು:
ಸೆ.26ರಿಂದ ಅ.1ರವರೆಗೆ ಜಿಲ್ಲೆಯ ಒಂದೊಂದು ತಾಲೂಕಿನ ಮಕ್ಕಳು ದಸರಾ ದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸೆ. 26ರಂದು ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕುಗಳ 5 ಹೋಬಳಿ, ಸೆ. 27ರಂದು ಹುಣಸೂರು ತಾಲೂಕಿನ 4 ಹೋಬಳಿ, ಸೆ. 28ರಂದು ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನ 6 ಹೋಬಳಿ, ಸೆ.29ರಂದು ಮೈಸೂರು ತಾಲೂಕಿನ 4 ಹೋಬಳಿ, ಸೆ. 30ರಂದು ನಂಜನಗೂಡು ತಾಲೂಕಿನ 5 ಹೋಬಳಿ, ಅ. 1ರಂದು ಪಿರಿಯಾಪಟ್ಟಣ ತಾಲೂಕಿನ 4 ಹೋಬಳಿ ಹಾಗೂ ತಿ.ನರಸೀಪುರ ತಾಲೂಕಿನ 5 ಹೋಬಳಿಯ ಮಕ್ಕಳು ದಸರಾ ದರ್ಶನದಲ್ಲಿ ಭಾಗವಹಿಸಲಿದ್ದಾರೆ. ಒಟ್ಟಾರೆ ಜಿಲ್ಲೆಯ 1,650 ವಿದ್ಯಾರ್ಥಿಗಳು ದಸರಾ ವೇಳೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವ ಅವಕಾಶ ಪಡೆಯಲಿದ್ದಾರೆ.
ಮಕ್ಕಳಿಗಾಗಿ ಎರಡು ದಿನ ಕಾರ್ಯಕ್ರಮ
ಸೆ.29 ಮತ್ತು 30ರಂದು ಜಗನ್ಮೋಹನ ಅರಮನೆ ಆವರಣದಲ್ಲಿ ಮಕ್ಕಳ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ. ಎರಡು ದಿನ ಮಕ್ಕಳಿಗೆ ನಾನಾ ಸ್ಪರ್ಧೆ, ಭರಪೂರ ಮನರಂಜನೆಯ ಜತೆಗೆ ಮಕ್ಕಳ ಮೇಲಿನ ದೌರ್ಜನ್ಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಬಾರಿ ಮಕ್ಕಳ ದಸರಾವನ್ನು ಆಯೋಜಿಸಲಾಗಿದೆ. ಮಕ್ಕಳು ಆಡಿ ನಲಿಯಲು, ತಮ್ಮಲ್ಲಿನ ಸೃಜನಶೀಲ ಪ್ರತಿಭೆ ಅನಾವರಣ ಮಾಡಲು ವೇದಿಕೆ ಸಿದ್ಧಗೊಳ್ಳುತ್ತಿದೆ.
ಸೆ. 29ರಂದು ಮಕ್ಕಳ ದಸರಾಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಚಾಲನೆ ನೀಡಲಿದ್ದಾರೆ. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮೇಯರ್ ಶಿವಕುಮಾರ್ ಭಾಗವಹಿಸಲಿದ್ದಾರೆ. ಜಿಲ್ಲೆಯ 1 ಸಾವಿರ ಮಕ್ಕಳು, 200 ಶಿಕ್ಷಕರು ಸಾಂಸ್ಕೃತಿಕ ಸ್ಪರ್ಧೆ ಮತ್ತು ದೇಸಿ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಚಿತ್ರಕಲೆ, ವೇಷಭೂಷಣ, ಪ್ರಬಂಧ ರಚನೆ, ಆಶುಭಾಷಣ ಸೇರಿ ಒಟ್ಟು 18 ಸ್ಪರ್ಧೆಗಳನ್ನು ಸಂಘಟಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್ ತಿಳಿಸಿದರು.
ಇದೇ ವೇಳೆ ಆಕರ್ಷಕ ವಸ್ತುಪ್ರದರ್ಶನ ಏರ್ಪಡಿಸಲಾಗುತ್ತಿದೆ. ಪ್ರತಿ ತಾಲೂಕಿಗೆ ಒಂದು ಮಳಿಗೆ ನೀಡಲಾಗಿದೆ. ಮಕ್ಕಳ ಕುತೂಹಲಕ್ಕೆ ವೇದಿಕೆಯಾಗಿದೆ. ಕಲೆ, ಸಾಹಿತ್ಯ, ವಿಜ್ಞಾನ ಮತ್ತು ಕರಕುಶಲ ಕಲೆಗಳ ಪ್ರದರ್ಶನಕ್ಕೆ ಅವಕಾಶ ದೊರೆಯಲಿದೆ.
ಬಾಲಶ್ರೀ ಪ್ರಶಸ್ತಿ ಪಡೆದ ಮಕ್ಕಳಿಂದ ಉದ್ಘಾಟನೆ:
2019ಕ್ಕೂ ಮೊದಲು ಮಕ್ಕಳ ದಸರಾಗೆ ಸೆಲೆಬ್ರಿಟಿ ಮಕ್ಕಳನ್ನು ಆಹ್ವಾನಿಸಲಾಗುತ್ತಿತ್ತು. ಸಿನಿಮಾ ಮತ್ತು ಕಿರುತೆರೆಯಲ್ಲಿ ಮಿಂಚಿದ ಮಕ್ಕಳ ಆಹ್ವಾನದಿಂದ ಉಳಿದ ಮಕ್ಕಳಿಗೆ ಸ್ಫೂರ್ತಿ ಬರುತ್ತಿತ್ತು. ಈ ವರ್ಷ ಅದ್ದೂರಿ ದಸರಾ ಆಚರಣೆಯಾದರೂ ಅನುದಾನದ ಕೊರತೆಯಿಂದ ಸೆಲೆಬ್ರಿಟಿ ಮಕ್ಕಳನ್ನು ಆಹ್ವಾನಿಸುತ್ತಿಲ್ಲ. ಜಿಲ್ಲಾ ಮಟ್ಟದ ಬಾಲಶ್ರೀ ಪ್ರಶಸ್ತಿ ಪಡೆದ ಮಕ್ಕಳನ್ನು ಆಹ್ವಾನಿಸಲು ಮಕ್ಕಳ ದಸರಾ ಸಮಿತಿ ಚಿಂತನೆ ನಡೆಸಿದೆ.
ಈ ಬಾರಿ ಮಕ್ಕಳ ದಸರಾವನ್ನು ವಿಶೇಷ ರೀತಿಯಲ್ಲಿ ಆಯೋಜಿಸಲಾಗುತ್ತಿದೆ. ಮಕ್ಕಳಿಗೆ ಮನರಂಜನೆ, ನಾನಾ ಸ್ಪರ್ಧೆ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಮುಖ್ಯವಾಗಿ ಮಕ್ಕಳಿಗಾಗಿ ‘ಮಕ್ಕಳ ದಸರಾ ದರ್ಶನ’ ಎಂಬ ಕಾರ್ಯಕ್ರಮ ರೂಪಿಸಲಾಗಿದೆ. ಜಿಲ್ಲೆಯಲ್ಲಿ 7, 8 ಮತ್ತು 9 ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳನ್ನು ಕರೆತಂದು ಒಂದು ದಿನ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳನ್ನು ಪರಿಚಯಿಸುವುದು ಇದರ ಉದ್ದೇಶವಾಗಿದೆ.ರಾಮಚಂದ್ರರಾಜೇ ಅರಸ್, ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ