ಜಿಲ್ಲೆ

ಚಿಣ್ಣರೊಂದಿಗೆ ಕಾಲಕಳೆದ ಡಿಸಿ, ಸಿಇಒ: ಬಾಲಮಂದಿರದಲ್ಲಿ ಮಕ್ಕಳ ದಿನ ಆಚರಣೆ

ಮಂಡ್ಯ: ನಗರದ ಬಾಲಮಂದಿರದಲ್ಲಿರುವ ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಕ್ಕಳ ದಿನವನ್ನು ಆಚರಣೆ ಮಾಡಿದರು.

ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸರ್ಕಾರಿ ಬಾಲಕಿಯರ ಮತ್ತು ಬಾಲಕರ ಬಾಲಮಂದಿರದ ಸಹಯೋಗದಲ್ಲಿ ಆಯೋಜಿಸಿದ್ದ ದಿನಾಚರಣೆ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಕುಮಾರ, ಪಾಲಕರ ಪ್ರೀತಿಯಿಂದ ವಂಚಿತರಾಗಿರುವ ಮಕ್ಕಳಿಗೆ ಸರ್ಕಾರದ ವತಿಯಿಂದ ನಡೆಯುತ್ತಿರುವ ಬಾಲಮಂದಿರದಲ್ಲಿ ಅಧಿಕಾರಿ, ಸಿಬ್ಬಂದಿ ಪ್ರೀತಿಯನ್ನು ತೋರುವ ಮೂಲಕ ಪೋಷಿಸುತ್ತಾರೆ. ಈ ಮಕ್ಕಳೊಂದಿಗೆ ದಿನಾಚರಣೆ ಆಚರಿಸುತ್ತಿರುವುದು ಸಂತೋಷದ ವಿಷಯ. ಮಕ್ಕಳು ಈ ದೇಶದ ಸಂಪತ್ತು. ಅವರನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಎಲ್ಲ ಮಕ್ಕಳಿಗೂ ಸಮಾನವಾದ ಪ್ರೀತಿ ಸಿಗುವಂತಾಗಬೇಕು. ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆಯಾಗಿದೆ ಎಂದರು.

ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿದರು. ಜಿಲ್ಲಾ ಮಕ್ಕಳ ಹಕ್ಕುಗಳ ಸಂರಕ್ಷಣಾಧಿಕಾರಿ ರಶ್ಮಿ, ಮಕ್ಕಳ ಕಲ್ಯಾಣ ಸಮಿತಿಯ ಅಶ್ವಥ್ ನಾರಾಯಣ್, ದಾಕ್ಷಾಯಿಣಿ, ಮಕ್ಕಳ ರಕ್ಷಣಾಧಿಕಾರಿ ರಾಜೇಂದ್ರ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಬಾಲಮಂದಿರದ ಮಕ್ಕಳು ಬಿಡಿಸಿದ ಚಿತ್ರಕಲೆ ಹಾಗೂ ವಿವಿಧ ಮಾದರಿಯ ವಸ್ತುಗಳ ಪ್ರದರ್ಶನ ನಡೆಯಿತು.