ಜಿಲ್ಲೆ

ವಿಡಿಎಸ್ ಕ್ಲಾಸಿಕ್ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ.

Gadag - Shivanand Hiremath

ಗದಗ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಮ್ಮಿಕೊಳ್ಳಲಾಯಿತು.

ಶಾಲೆಯ ನಿರ್ದೇಶಕರಾದ ಶ್ರೀ ಪ್ರತೀಕ. ಎಸ್. ಹುಯಿಲಗೋಳ ರವರು ಭಾರತದ ಇತಿಹಾಸದ ಚರಿತ್ರೆಯಲ್ಲಿ ಮಕ್ಕಳ ದಿನಾಚರಣೆ ಮಹತ್ವದ್ದಾಗಿದೆ. ಆದ್ದರಿಂದ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮವಾದ ಶಿಕ್ಷಣ, ಒಳ್ಳೆಯ ಪರಿಸರ, ಸಂಸ್ಕೃತಿ ಸಂಸ್ಕಾರ,  ಆರೋಗ್ಯಕರವಾದ ಆಹಾರ, ಉತ್ತಮ ನಡೆ ನುಡಿ ಹಾಗೂ  ಭಯ ಭಕ್ತಿಯನ್ನು ನೀಡುವುದು ಸಮಾಜದ ಜವಾಬ್ದಾರಿ ಎಂದು ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಕರೆ ನೀಡಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ. ಆರ್. ಡೊಳ್ಳಿನ ರವರು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಭಾರತದ ಮೊಟ್ಟಮೊದಲ ಪ್ರಧಾನಮಂತ್ರಿಗಳಾದ ಜವಾಹರ್ಲಾಲ್ ನೆಹರು ಅವರು ದೇಶದ ಸಮಗ್ರ ಅಭಿವೃದ್ಧಿಗಾಗಿ ಹಗಲು ಇರುಳು ಎನ್ನದೆ ಶ್ರಮಿಸಿದ್ದಾರೆ, ಇವರು ಬಡತನದ ನಿರ್ಮೂಲನೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ, ಅದರಲ್ಲಿ ಪಂಚವಾರ್ಷಿಕ ಯೋಜನೆ ಹಾಗೂ ವಿದೇಶಾಂಗ ನೀತಿ, ಪಂಚಶೀಲ ತತ್ವವನ್ನು ಜಾರಿಗೆ ತಂದರು. ಚಾಚಾ ನೀರು ಅವರಿಗೆ ಮಕ್ಕಳೆಂದರೆ ಪಂಚಪ್ರಾಣ, ಮಕ್ಕಳು ದೇಶದ ಸಂಪತ್ತು. ಇಂದಿನ ಮಕ್ಕಳೇ ನಾಳಿನ ಉತ್ತಮ ಪ್ರಜೆಗಳು, ಹಾಗಾಗಿ ನನ್ನ ಹುಟ್ಟುಹಬ್ಬವನ್ನು ಆಚರಣೆ ಮಾಡುವ ಬದಲು ಇದೇ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಬೇಕೆಂದರು. ಮಕ್ಕಳು ದೇಶದ ಸತ್ಪ್ರಜೆಗಳಾಗಬೇಕು. ತಂದೆ ತಾಯಿ, ಗುರು ಹಿರಿಯರನ್ನು ಗೌರವಿಸಬೇಕು ಒಳ್ಳೆಯ ಶಿಕ್ಷಣವನ್ನು ಪಡೆದು, ದೇಶದ ಅಭಿವೃದ್ಧಿಗಾಗಿ ಕೈಜೋಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

*ಸಂಸ್ಥೆಗೆ ಕರುನಾಡ ಕಾಯಕ ಸಮ್ಮಾನ ರಾಜ್ಯ ಪ್ರಶಸ್ತಿ* 

ಇದೇ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಡಿ. ಬೀ. ಹುಯಿಲಗೋಳ  ಹಾಗೂ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ, ಖಜಾಂಚಿ ಶ್ರೀ ನರಸಿಂಹ. ಬಿ. ಕಳಸಾಪೂರ, ಶ್ರೀಮತಿ ಶುಭಲಕ್ಷ್ಮೀ ಹುಯಿಲಗೋಳ ರವರು ನಮ್ಮ ಸಂಸ್ಥೆಗೆ ಮೊನ್ನೆ ತಾನೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು, ಅದರ ಜೊತೆ ಮತ್ತೊಂದು ರಾಜ್ಯ ಪ್ರಶಸ್ತಿಯಾದ ಗದಗ ವಾಣಿ ಪ್ರಾದೇಶಿಕ ದಿನಪತ್ರಿಕೆ ಹಾಗೂ ಟಿವಿ ಚಾನಲ್ ವತಿಯಿಂದ ಕೊಡಮಾಡುವ  "ಕರುನಾಡ ಕಾಯಕ ಸಮ್ಮಾನ ರಾಜ್ಯ ಪ್ರಶಸ್ತಿ" ನಮ್ಮ ಸಂಸ್ಥೆಗೆ ಲಭಿಸಿದೆ, ನಮ್ಮ ಸಂಸ್ಥೆಯ ಮುಡಿಗೆ ಮತ್ತೊಂದು ಪ್ರಶಸ್ತಿಯ ಕಿರೀಟ ದೊರೆತಂತಾಗಿದೆ.  ಇದು ನಮ್ಮ ಸಂಸ್ಥೆಯ ಹೆಮ್ಮೆಯ ವಿಷಯ ಎಂದು ತಿಳಿಸಿದರು. ಇದೇ ವೇಳೆ ಶ್ರೀ ಬಸವರಾಜ ಕೋಟಗಿ, ಗದಗ ವಾಣಿ ಪತ್ರಿಕೆಯ ಸಂಪಾದಕರಾದ ಶ್ರೀ ಮಂಜುನಾಥ ರಾಠೋಡ್, ಗದಗ ಜಿಲ್ಲಾ ವರದಿಗಾರರಾದ ಶ್ರೀ ಮುತ್ತಣ್ಣ ಮರಡಿ ಹಾಗೂ ಶ್ರೀ ವಾದಿರಾಜ ಕಾತೊಟೆ ರವರು ಈ ಸಂತಸದ ಕ್ಷಣಗಳಲ್ಲಿ ಉಪಸ್ಥಿತರಿದ್ದರು. 

*ಮಕ್ಕಳಿಂದ ವಿವಿಧ ವೇಷ ಭೂಷಣ*

ಕೆಲವು ವಿದ್ಯಾರ್ಥಿಗಳು ನಾಡು ನುಡಿಗೆ ಶ್ರಮಿಸಿದ  ಮಹಾ ನಾಯಕರಾದ ಹುಯಿಲಗೋಳ ನಾರಾಯಣರಾಯರು, ಕುಮಾರವ್ಯಾಸರು, ಕಿತ್ತೂರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಶ್ರೀ ಕೃಷ್ಣದೇವರಾಯ, ಸರ್ ಎಂ. ವಿಶ್ವೇಶ್ವರಯ್ಯ, ಒನಕೆ ಓಬವ್ವ, ತಾಯಿ ಭುವನೇಶ್ವರಿ ದೇವಿ, ಚಾಚಾ ನೆಹರು, ಕೊಡಗಿನ ವೇಷ, ಲಂಬಾಣಿ ವೇಷ, ವಿವಿಧ ಜನಪದ ಕಲೆಗಳ ವೇಷ, ಹೀಗೆ  ವಿವಿಧ ರೀತಿಯ ವೇಷ ಭೂಷಣ ತೊಟ್ಟು, ತಮ್ಮದೇ ಆದ ಡೈಲಾಗ್ ಹೇಳಿ, ಕಾರ್ಯಕ್ರಮಕ್ಕೆ ಮೆರಗು ತಂದರು. ನಂತರ ಮಕ್ಕಳಿಂದ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಶಿಕ್ಷಕಿಯರಾದ ಶ್ರೀಮತಿ ರೇಣುಕಾ ವೆಂಕಟಾಪುರ, ಶ್ರೀಮತಿ ಸುಮಂಗಲಾ ಆಸಂಗಿ ಹಾಗೂ ಶ್ರೀಮತಿ ವೀಣಾ ಹುಬ್ಬಳ್ಳಿ ರವರು ಅನಿಸಿಕೆ ವ್ಯಕ್ತಪಡಿಸಿದರು. ಕೆಲವು ವಿದ್ಯಾರ್ಥಿಗಳು ಚಾಚಾ ನೆಹರು ಅವರ ಜಯಂತಿ ಹಾಗೂ ಮಕ್ಕಳ ದಿನಾಚರಣೆ ಕುರಿತು ತಮ್ಮ-ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಶಿಕ್ಷಕಿಯರಾದ ಕು. ಶೋಭಾ ಪೂಜಾರ ಹಾಗೂ ಕು. ವೀಣಾ ನಾಯಕ ರವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶಿಕ್ಷಕಿಯರಾದ ಶ್ರೀಮತಿ ಶ್ವೇತಾ ಮೇಲಗಿರಿ ನಿರೂಪಿಸಿದರು, ಶ್ರೀಮತಿ ಅರ್ಚನಾ ಗಿರಿತಿಮ್ಮಣ್ಣವರ ಸ್ವಾಗತಿಸಿದರು ಹಾಗೂ ಶ್ರೀಮತಿ ಪಾರ್ವತಿ ಕಟ್ಟಿಮನಿ ವಂದಿಸಿದರು, 

ಕಾರ್ಯಕ್ರಮದಲ್ಲಿ ಅತಿಥಿ ಮಹನೀಯರು, ಶಾಲೆಯ ಸಮಸ್ತ ಶಿಕ್ಷಕ/ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡಿದ್ದರು.