ಕುರುಗೋಡಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಗೆಣಿಕೆಹಾಳ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ ವೇಳೆ ಪುರಸಭೆ ಅಧ್ಯಕ್ಷ ಶೇಖಣ್ಣ, ಪ್ರಮುಖರಾದ ಸಿ.ನಿಂಗಪ್ಪ, ಗುಂಡಪ್ಪನವರ ನಾಗರಾಜ್, ತುಕಾರಾಮ್ ಗೊರವ, ಜಡೇಶ್ ಇದ್ದರು. 
ಜಿಲ್ಲೆ

ಮಕ್ಕಳ ಸಮಗ್ರ ಬೆಳವಣಿಗೆಗೆ ಕಾರಂಜಿ ಸಹಕಾರಿ

Kopala - Desk - Eraveni

ಕುರುಗೋಡು: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರ ಹಾಕಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ ಎಂದು ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ನಿಂಗಪ್ಪ ಹೇಳಿದರು.

ಪಟ್ಟಣದ ಬಳ್ಳಾರಿ ರಸ್ತೆಯಲ್ಲಿರುವ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಗೆಣಿಕೆಹಾಳ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ಪ್ರತಿಭಾ ಕಾರಂಜಿ ಆಯೋಜನೆಯಿಂದ ಶೈಕ್ಷಣಿಕ, ಸಾಮಾಜಿಕ ಪ್ರಗತಿ ಸಾಧಿಸಲು ಅನುಕೂಲವಾಗುತ್ತದೆ. ಉತ್ತಮ ಮೌಲ್ಯಗಳನ್ನು ತಿಳಿಸಬಹುದು. ಸರ್ಕಾರ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ, ಮಕ್ಕಳ ಮೇಳ, ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಜಾನಪದ ಪ್ರಕಾರದ ಪ್ರತಿಭೆ ತೋರಿ ಸಾಂಸ್ಕೃತಿಕವಾಗಿ ಮುಂದೆ ಬರಬೇಕು ಎಂದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗುಂಡಪ್ಪನವರ ನಾಗರಾಜ್ ಮಾತನಾಡಿ, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳ ಕಲಿಕೆಯಿಂದ ಮಕ್ಕಳಲ್ಲಿ ಜ್ಞಾನ ವಿಕಾಸವಾಗುತ್ತದೆ. ಶಿಕ್ಷಕರು ಹಾಗೂ ಪಾಲಕರು ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಬೇಕು ಎಂದರು.

ಸರ್ಕಾರಿ ಮತ್ತು ಖಾಸಗಿ ಶಾಲೆಯ ಒಟ್ಟು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಾನಪದ ನೃತ್ಯ, ಕೋಲಾಟ, ದೇಶಭಕ್ತಿ, ಅಭಿನಯ ಗೀತೆ, ರಸಪ್ರಶ್ನೆ, ಧಾರ್ಮಿಕ ಪಠಣ, ಕಂಠಪಾಠ ಪದ್ಯಗಳು ಹಾಗೂ ಇತರ ಸ್ಪರ್ಧೆಗಳಲ್ಲಿ ಮಕ್ಕಳು ಅತ್ಯಂತ ಲವಲವಿಕೆಯಿಂದ ಪಾಲ್ಗೊಂಡಿದ್ದರು.

ಗೌರವಾಧ್ಯಕ್ಷ ಕೆ.ಸಣ್ಣ ಮಾರೆಪ್ಪ, ಪ್ರೌಢಶಾಲೆ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ಕೋರ್ ನಾಯ್ಕ, ಹರಿಕೃಪ ಕಾಲನಿ ಮುಖ್ಯಶಿಕ್ಷಕ ಬಸವರಾಜ್, ಡಿ.ಎಂ. ಮಲ್ಲಿಕಾರ್ಜುನ, ಎಂ.ಸಂತೋಷ, ಶಿಕ್ಷಕ ಗವಿಸಿದ್ದಪ್ಪ ಅಲ್ಲನಗರ, ಬಸವರಾಜ್ ಬಲ್ಲೂರು, ಮಂಚಾಲಮ್ಮ, ನಟರಾಜ್, ಅಂಜಿನಪ್ಪ ಇತರರಿದ್ದರು.