ಜಿಲ್ಲೆ

ಮಕ್ಕಳ ಸಾಧನೆಯಿಂದ ಶಾಲೆ, ಪಾಲಕರಿಗೂ ಕೀರ್ತಿ

ಹಿರೀಸಾವೆ: ವಿದ್ಯಾರ್ಥಿಗಳು ತಂದುಕೊಡುವ ಗೆಲುವಿನಿಂದ ಶಾಲೆಗಷ್ಟೇ ಅಲ್ಲದೆ ಪಾಲಕರಿಗೂ ಕೀರ್ತಿ ಸಿಗಲಿದೆ ಎಂದು ಜ್ಞಾನಪ್ರಭಾ ಇಂಟರ್ ನ್ಯಾಷನಲ್ ಶಾಲೆಯ ಅಧ್ಯಕ್ಷ ಎ.ಜಿ.ಪ್ರಭಾಕರ್ ಹೇಳಿದರು.

ಪಟ್ಟಣದ ಜ್ಞಾನಪ್ರಭಾ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವ ಮೂಲಕ ಮುಖ್ಯಭೂಮಿಕೆಗೆ ತರುವುದು ಶಿಕ್ಷಕರ ಕರ್ತವ್ಯ ಎಂದರು.

ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ನೀಡಿ ದೇಶಕ್ಕೆ ಗೆಲುವಿನ ಗರಿ ತಂದುಕೊಡುತ್ತಿರುವ ಅದೆಷ್ಟೋ ಕ್ರೀಡಾಪಟುಗಳು ಗ್ರಾಮೀಣ ಭಾಗದವರೇ ಎನ್ನುವುದು ಹೆಗ್ಗಳಿಕೆಯ ಸಂಗತಿ ಎಂದರು.

ಗೆಲುವು ಎಂಬುದು ಸುಮ್ಮನೆ ಸಿಗುವ ವಸ್ತುವಲ್ಲ. ಶಿಸ್ತು, ಶ್ರದ್ಧೆಯೊಂದಿಗೆ ಕಠಿಣ ಪರಿಶ್ರಮದಿಂದ ನಿರಂತರ ಅಭ್ಯಾಸದಲ್ಲಿ ತೊಡಗಿಕೊಂಡಲ್ಲಿ ಮಾತ್ರ ಗೆಲುವಿನ ಗುರಿ ಮುಟ್ಟಲು ಸಾಧ್ಯವಾಗಲಿದೆ ಎಂದು ಕಿವಿಮಾತು ಹೇಳಿದರು.

ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ರಿಲೇಯಲ್ಲಿ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸುವ ಮೂಲಕ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಶಾಲೆಯ ವಿದ್ಯಾರ್ಥಿನಿಯರಾದ ಸ್ಮಿತಾ, ತನುಶ್ರೀ, ಹರ್ಷಿತಾ ಹಾಗೂ ತೇಜಸ್ವಿನಿ ಅವರನ್ನು ಅಭಿನಂದಿಸಲಾಯಿತು.

100 ಮೀಟರ್ ಓಟದ ಸ್ವರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿನಿ ಸ್ಮಿತಾ ಅವರನ್ನು ಅಭಿನಂದಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎ.ಜಿ.ಪ್ರಭಾಕರ್, ಕಾರ್ಯದರ್ಶಿ ಹರೀಶ್, ಮುಖ್ಯಶಿಕ್ಷಕ ಸಂಜಯ್ ಕ್ರಿಸ್ಟೋಪರ್, ದೈಹಿಕ ಶಿಕ್ಷಣ ಶಿಕ್ಷಕ ನಿಖಿಲ್ ಅಂಥೋನಿ ಹಾಗೂ ಶಿಕ್ಷಕರರು ಮತ್ತು ಪಾಲಕರು ಇದ್ದರು.