ಜಿಲ್ಲೆ

ಮಕ್ಕಳ ಅಕಾಡೆಮಿ ರಜತ ಮಹೋತ್ಸವ ಸಂಭ್ರಮ ವರ್ಷ ಇಡೀ ವಿವಿಧ ಕಾರ್ಯಕ್ರಮ ಆಯೋಜನೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಕ್ಕಳ ಅಕಾಡೆಮಿಯ ರಜತ ಮಹೋತ್ಸವ ನಿಮಿತ್ತ 25000 ಮಕ್ಕಳನ್ನು ಆರೋಗ್ಯವಂತರನ್ನಾಗಿಸುವ ಗುರಿ ಜತೆಗೆ ಇಡೀ ವರ್ಷ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ. ರಾಜನ್​ ದೇಶಪಾಂಡೆ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳ ಸರ್ವತೋಮುಖ ಬೆಳಗೆವಣಿಗೆಗೆ ಸ್ಥಾಪಿಸಿರುವ ಅಕಾಡೆಮಿ 25 ವರ್ಷಗಳ ಕಾಲ ಸಾಕಷ್ಟು ಕಾರ್ಯಗಳನ್ನು ನಡೆಸಿದೆ. ಇದೀಗ ರಜತ ಮಹೋತ್ಸವ ಸಂಭ್ರಮದ ನೆನಪಿಗಾಗಿ ಮಕ್ಕಳ ಅಭಿವೃದ್ಧಿಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜನೆ ರೂಪಿಸಲಾಗಿದೆ ಎಂದರು.

ವರ್ಷಪೂರ್ತಿ 25 ಸಾವಿರ ವಿದ್ಯಾರ್ಥಿಗಳಿಗೆ ಆರೋಗ್ಯ ಶಿಬಿರ ಹಾಗೂ ಪೌಷ್ಠಿಕ ಆಹಾರದ ಬಗ್ಗೆ ತಿಳಿವಳಿಕೆ ಹಾಗೂ ಚರ್ಚೆ, ಸಣ್ಣ ಮಕ್ಕಳಿಗೆ ಬರೆದ 25 ಕಿರು ಪುಸ್ತಕಗಳ ಪ್ರಕಟ, ಅಳ್ನಾವರ ಸಮೀಪದ ಮಡಕಿಹೊನ್ನಳ್ಳಿ ಎಂಬ ಹಿಂದುಳಿದ ಗ್ರಾಮ ದತ್ತು ಪಡೆದು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು. 25 ಅಸಾಮಾನ್ಯ ಸಾಧಕರಿಗೆ ಸನ್ಮಾನ, ಶಾಲೆಗಳಲ್ಲಿ ಮಕ್ಕಳೇ ವೈದ್ಯರು, ಮಕ್ಕಳಿಗಾಗಿ ಧಾರವಾಡ ಐಡಲ್​ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಸಂಸ್ಥೆ ಉಪಾಧ್ಯಕ್ಷ ಡಾ. ಆನಂದ ಪಾಂಡುರಂಗಿ ಮಾತನಾಡಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಉದ್ದೇಶ. ಹೀಗಾಗಿ ಮಕ್ಕಳು ಮೋಬೈಲ್​ ಸೇರಿ ಡಿಜಿಟಲ್​ ಅಡಿಕ್ಷನ್​ನಿಂದ ದೂರ ಉಳಿಯುವಂತೆ ಮಾಡಲು ವಿಶೇಷ ಆದ್ಯತೆ ನೀಡಲಾಗುವುದು. ಇವುಗಳ ಜತೆಗೆ ವಿಜ್ಞಾನ ಪ್ರದರ್ಶನ, ಮಕ್ಕಳು ಹಾಗೂ ಪಾಲಕರಿಗೆ ರಸಪ್ರಶ್ನೆ ಕಾರ್ಯಕ್ರಮ, ಸಂಸ್ಕೃತ ಭಾಷಾ ಕಾರ್ಯಾಗಾರ ಸೇರಿ ಇನ್ನೂ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

ಕಳೆದ ವರ್ಷ 1.5 ಲಕ್ಷಕ್ಕೂ ಹೆಚ್ಚಿನ ಮಕ್ಕಳಿಗೆ ವೈದ್ಯಕೀಯ ತಪಾಸಣೆ, ದಂತರೋಗ ತಪಾಸಣೆ ಸೇರಿ ಹಲವಾರು ಕಾರ್ಯಕ್ರಮ ನಡೆಸಲಾಗಿದೆ. ಮಗು ನೀ ನಗು ಕಾರ್ಯಕ್ರಮದಡಿ ಪೌಷ್ಠಿಕತೆಗೆ ಒತ್ತು ನೀಡುವುದು ಮತ್ತು ತೀವ್ರವಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಹೊರತರಲಾಗಿದೆ. ಮಕ್ಕಳೊಂದಿಗೆ ಪಾಲಕರು ಒಳ್ಳೆಯ ಸಮಯ ಕಳೆಯಬೇಕು ಎಂದರು.

ಸಿ.ಯು. ಬೆಳ್ಳಕ್ಕಿ, ಡಾ. ಎಂ.ವೈ. ಸಾವಂತ ಇತರರು ಇದ್ದರು.