ಕಲಬುರಗಿ: ಮುದ್ದು ಮಕ್ಕಳು ಹೂವು, ಕುಂಕು, ವಿಭೂತಿ, ಜಲದೊಂದಿಗೆ ತಂದೆ, ತಾಯಿ ಪಾದ ತೊಳೆದು, ಪೂಜೆ ಸಲ್ಲಿಸಿದ ಮಕ್ಕಳು, ಮುರುಘೇಂದ್ರ ಶ್ರೀಗಳ ಆಶೀರ್ವಾದ ನುಡಿ ಸಿಂಚನದ ಮಧ್ಯೆ ರಾಮ ನಾಮ ಗೀತೆಗಳ ಝೇಂಕಾರ…
ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ನಗರದ ಕೋಟನೂರ (ಡಿ)ಯ ಶ್ರೀ ಸಿದ್ಧಶ್ರೀ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಹೆತ್ತವರು, ಕುಟುಂಬಗಳ ಬಾಂಧವ್ಯದ ಭಾವನಾತ್ಮಕ ಕ್ಷಣ ಸೃಷ್ಟಿಯಾಯಿತು.
ಸಾಂಪ್ರದಾಯಿಕ ಲುಂಗಿ, ಗಾಂಧಿ ಟೋಪಿಯೊಂದಿಗೆ ತಂದೆಯAದಿರು, ಸೀರೆ ಧರಿಸಿ ಬಂದ ತಾಯಂದಿರನ್ನು ಮಕ್ಕಳು ಭಕ್ತಿ ಭಾವದೊಂದಿಗೆ ಪಾದಪೂಜೆ ಸಲ್ಲಿಸಿದರು. ಇದರ ಮಧ್ಯೆ ಪ್ರಭು ಶ್ರೀರಾಮಚಂದ್ರನ ಹಾಡಿ ಹೊಗಳುವ, ಭಕ್ತಿ ಭಾವದಲ್ಲಿ ತೇಲಿಸುವ ಗೀತೆಗಳು ರಾಮವೈಭವವನ್ನು ಸ್ಮರಿಸಿದವು. ಶ್ರೀ ಡಾ.ಮುರುಘರಾಜೇಂದ್ರ ಮಹಾಸ್ವಾಮೀಜಿಗಳಿಗೆ ಪಾದಪೂಜೆ ಸಲ್ಲಿಸಿ, ಸಾಮೂಹಿಕ ಆರತಿಯೊಂದಿಗೆ ದೀಪ ನಮನ ಸಲ್ಲಿಸಲಾಯಿತು. ನೂರಾರು ಮಹಿಳೆಯರು ಸಾಮೂಹಿಕವಾಗಿ ಆರತಿ ಬೆಳಗಿದ್ದು, ಸಾಂಸ್ಕೃತಿಕ ಲೋಕವನ್ನೇ ಸೃಷ್ಟಿಸಿತು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿದರು. ವಿಜಯವಾಣಿ ಸ್ಥಾನಿಕ ಸಂಪಾದಕ ಬಾಬುರಾವ ಯಡ್ರಾಮಿ, ಸಚಿನ ಗಣಾಚಾರಿ, ಅಶೋಕ ಪಾಟೀಲ್, ಬಸಯ್ಯ ಮಠಪತಿ ಇತರರಿದ್ದರು. ಅಮೃತಾ ಕೊರಳ್ಳಿ ಸ್ವಾಗತಿಸಿದರು. ರುದ್ರಯ್ಯ ಮಠಪತಿ ನಿರೂಪಣೆ ಮಾಡಿದರು. ಕವಿತಾ ಕಾವಳೆ ವಂದಿಸಿದರು.