ಗಂಗಾವತಿ: ಕರೊನಾ ಮುಂಜಾಗ್ರತೆ ಕ್ರಮಗಳ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಹೋಳಿ ಹಬ್ಬದ ರಂಗೋತ್ಸವ ನೀರಸವಾಗಿತ್ತು. ಕಾಲನಿಗಳಲ್ಲಿ ಮಾತ್ರ ಗುಂಪುಗುಂಪಾಗಿ ಬಣ್ಣ ಆಡುವುದು ಸೋಮವಾರ ಕಂಡು ಬಂತು.
ಕುರಹಿನ ಶೆಟ್ಟಿ ಮತ್ತು ದೇವಾಂಗ ಸಮುದಾಯ ಪ್ರತಿಷ್ಠಾಪಿಸಿ ರತಿ ಮನ್ಮಥ ರೂಪಕ ಮಧ್ಯರಾತ್ರಿ ಕಾಮದಹನ ಶಾಸ ನೆರವೇರಿಸಲಾಯಿತು. ಹರಕೆಯಿಂದ ಒಪ್ಪಿಸಿದ ಮತ್ತು ಕಳವು ಮಾಡಿದ ಕಟ್ಟಿಗೆಗಳನ್ನು ಸುಡುವ ಮೂಲಕ ಹೋಳಿ ಹಬ್ಬದ ರಂಗೋತ್ಸವಕ್ಕೆ ಚಾಲನೆ ನೀಡಲಾಯಿತು. ಪ್ರಸಕ್ತ ಸಾಲಿನಲ್ಲಿ ಬಣ್ಣದ ಗಡಿಗೆ ಒಡೆಯುವ ಸ್ಪರ್ಧೆಗೆ ಪೊಲೀಸರು ಬ್ರೇಕ್ ಹಾಕಿದ್ದರಿಂದ ಪ್ರಮುಖ ರಸ್ತೆಗಳಲ್ಲಿ ರಂಗೋತ್ಸವ ಕಂಡು ಬರಲಿಲ್ಲ.
ಜಯನಗರ, ಹೇರೂರು ಓಣಿ, ಜೈನ್ ಕಾಲನಿಗಳಲ್ಲಿ ಮಹಿಳೆಯರು ಬಣ್ಣ ಓಕುಳಿಯಲ್ಲಿ ಪಾಲ್ಗೊಂಡಿದ್ದು, ಮಕ್ಕಳಲ್ಲಿ ಮಾತ್ರ ಉತ್ಸಾಹವಿತ್ತು. ಬಹುತೇಕ ಯುವಕರು ಶಾಸಕ್ಕೆಂಬಂತೆ ಬಣ್ಣದಲ್ಲಿ ಪಾಲ್ಗೊಂಡಿದ್ದು, ಸ್ನಾನಕ್ಕಾಗಿ ತುಂಗಭದ್ರಾ ನದಿ ತೀರ ಮತ್ತು ಎಡದಂಡೆ ಕಾಲುವೆಯತ್ತ ಜಮಾಯಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ನದಿ ತೀರದಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿತ್ತು. ಮೊದಲ ಬಾರಿಗೆ ಹೋಳಿಯಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಚಾಕಲೇಟ್, ಮಂಡಕ್ಕಿ, ಬಿಸ್ಕಿಟ್‌ನಿಂದ ತಯಾರಿಸಿದ ಹಾರದೊಂದಿಗೆ ಬಣ್ಣದ ಶಾಸ ನೆರವೇರಿಸಲಾಯಿತು. ಎಲ್ಲ ಪಕ್ಷದ ಮುಖಂಡರು ಹೋಳಿ ಹಬ್ಬದಿಂದ ತಪ್ಪಿಸಿಕೊಂಡಿದ್ದು, ಸ್ವಸ್ಥಳ ಖಾಲಿ ಮಾಡಿದ್ದರು. ಕರೊನಾ ಮುಂಜಾಗ್ರತೆ ಹಿನ್ನೆಲೆಯಲ್ಲಿ ಹೋಳಿ ಹಬ್ಬದ ಸಾರ್ವಜನಿಕ ಆಚರಣೆ ನಿರ್ಬಂಧಿಸಿದ್ದರಿಂದ ಯಾವುದೇ ಗದ್ದಲ ಕಂಡು ಬಂದಿಲ್ಲ. ಮುಂಜಾಗ್ರತೆ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿತ್ತು ಎಂದು ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ ಪ್ರತಿಕ್ರಿಯಿಸಿದರು.