ಜಿಲ್ಲೆ

ಶಾರದಾ ಪೂಜೆ ನೆರವೇರಿಸಿದ ಮಕ್ಕಳು

ವಿನಯ ಹೆಗಡೆ

ಕುಮಟಾ: ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟಿನ ಸರಸ್ವತಿ ವಿದ್ಯಾ ಕೇಂದ್ರದ ಪ್ರಾಥಮಿಕ ಶಾಲೆಯಲ್ಲಿ, ಶ್ರಾವಣ ಮಾಸದ ಶುಕ್ರವಾರದ ವರಮಹಾಲಕ್ಷ್ಮೀ ವೃತದ ವಿಶೇಷ ದಿನದ ಅಂಗವಾಗಿ ತಾಯಿ ಶಾರದೆಯ ಪೂಜೆ ನೆರವೇರಿತು.

ಇಲ್ಲಿ ಪ್ರತಿವರ್ಷವೂ ಶ್ರಾವಣದ ಶುಕ್ರವಾರ ಶಾರದಾ ಪೂಜೆ ನೆರವೇರಿಸುವ ಸಂಪ್ರದಾಯದಂತೆ ಶಾಲೆಯ ಮುಖ್ಯದ್ವಾರದಲ್ಲಿರುವ ಅಮೃತಶಿಲೆಯ ದಿವ್ಯವಾದ ವೀಣಾಪಾಣಿ ಶಾರದಾಂಬೆಯ ಮೂರ್ತಿಯನ್ನು ಹೂ, ತುಳಸಿ, ಮಾಲೆ, ರಂಗವಲ್ಲಿಯಿಂದ ಅಲಂಕರಿಸಿದ್ದರು.

ಶಿಕ್ಷಕರ ಮಾರ್ಗದರ್ಶನದಲ್ಲಿ ಪುಟ್ಟಮಕ್ಕಳೇ ಮಡಿಯುಟ್ಟು ಮಂತ್ರಪಠಣ ಮಾಡುತ್ತಾ ಪೂಜಾ ಕೈಂಕರ್ಯ ನೆರವೇರಿಸಿದರು.

ಸಂಸ್ಥೆಯ ರಂಗಾ ದಾಸ ಶಾನಭಾಗ ಹೆಗಡೆಕರ ಬಾಲಮಂದಿರದ ವಿದ್ಯಾರ್ಥಿಗಳು ಹಾಗೂ ಸರಸ್ವತಿ ವಿದ್ಯಾ ಕೇಂದ್ರದ ಮಕ್ಕಳು ಜಡೆಗೂಡಿ, ಸೌಂದರ್ಯ ಲಹರಿ, ಶಾರದಾ ಸ್ತೋತ್ರ, ಭಗವದ್ಗೀತಾ ಶ್ಲೋಕ-ಸ್ತುತಿಗಳು ಹಾಗೂ ಭಕ್ತಿಗೀತೆಗಳನ್ನು ಹಾಡಿದರು. ಸಂಸ್ಥೆಯ ಮುಖ್ಯಶಿಕ್ಷಕಿ ಸುಜಾತಾನಾಯ್ಕ, ಬಾಲಮಂದಿರದ ಮುಖ್ಯಶಿಕ್ಷಕಿ ಸಾವಿತ್ರಿ ಹೆಗಡೆ ನೇತೃತ್ವದಲ್ಲಿ ಶಿಕ್ಷಕ ವೃಂದ, ಪಾಲಕರು ಮತ್ತು ವಿದ್ಯಾರ್ಥಿಗಳು ಪೂಜಾ ಕಾರ್ಯವನ್ನು ಕಣ್ತುಂಬಿಕೊಂಡು ಪ್ರಸಾದ ಸ್ವೀಕರಿಸಿದರು.