ಮದ್ದೂರು: ಸಂಸ್ಕಾರ ಕಲಿತ ಮಕ್ಕಳು ದೇಶದ ಆಸ್ತಿಯಾಗಿದ್ದು, ಜತೆಗೆ ಅತ್ತ್ಯುನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ತಾವು ವ್ಯಾಸಂಗ ಮಾಡಿದ ಶಾಲೆ, ಶಿಕ್ಷಕರು ಹಾಗೂ ಪಾಲಕರಿಗೆ ಕೀರ್ತಿ ತರುವಂತಹ ಸತ್ಪ್ರಜೆಗಳಾಗಿ ರೂಪಗೊಳ್ಳುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ತಿಳಿಸಿದರು.
ಪಟ್ಟಣದ ಭಾರತ್ ವಿಕಾಸ್ ಪರಿಷತ್ ಕದಂಬ ಶಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಜೀವನದುದ್ದಕ್ಕೂ ಸಂಸ್ಕಾರವನ್ನು ರೂಢಿಸಿಕೊಂಡು ಅತ್ತ್ಯುನ್ನತ ಹುದ್ದೆಗಳನ್ನು ಅಲಂಕರಿಸಬೇಕೆಂದು ಕಿವಿಮಾತು ಹೇಳಿದರು.
ಹಣ, ಆಸ್ತಿ ಯಾರೂ ಬೇಕಾದರೂ ಸಂಪಾದಿಸಬಹುದು. ಆದರೆ ಸಂಸ್ಕಾರ ಮರೆತವರು ಏನನ್ನು ಸಾಧಿಸಲು ಸಾಧ್ಯವಿಲ್ಲ. ಗುರುಗಳು ಹಾಕಿಕೊಟ್ಟ ಮಾರ್ಗದರ್ಶನದ ಜತೆಗೆ ಶಿಸ್ತು, ಗುರಿ, ಏಕಾಗ್ರತೆ, ಸಾಧನೆಗಳನ್ನು ಮೈಗೂಡಿಸಿಕೊಂಡಲ್ಲಿ ತಾವು ಕಂಡ ಕನಸನ್ನು ನನಸು ಮಾಡಬಹುದಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಪಾಲಕರು ಮಕ್ಕಳನ್ನು ಕೇವಲ ಅಂಕ ಗಳಿಕೆಗಷ್ಟೇ ಸೀಮಿತಗೊಳಿಸುತ್ತಿರುವುದು ವಿಷಾದದ ಸಂಗತಿಯಾಗಿದ್ದು, ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳು ಜೀವನದಲ್ಲಿ ಮೇಲುಗೈ ಸಾಧಿಸಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿರುವ ಉದಾಹರಣೆಗಳು ಸಾಕಷ್ಟಿವೆ ಎಂದರು.
ಮಂಗಳೂರು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಎ.ಎನ್.ಪ್ರಕಾಶ್‌ಗೌಡ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಸರಳತೆಯನ್ನು ರೂಢಿಸಿಕೊಂಡು ಜತೆಗೆ ಮಾನವೀಯ ಮೌಲ್ಯಗಳ ನೆಲೆಗಟ್ಟಿನಲ್ಲಿ ಬದುಕನ್ನು ರೂಪಿಸಿಕೊಂಡು ತಮ್ಮ ಪೋಷಕರ ಆಸೆ ಆಕಾಂಕ್ಷೆಗಳನ್ನು ಈಡೇರಿಸುವಂತಾಗಬೇಕು ಎಂದು ಹೇಳಿದರು.
ಸಂಪರ್ಕ, ಸಹಯೋಗ, ಸಂಸ್ಕಾರ, ಸೇವೆ ಹಾಗೂ ಸಮರ್ಪಣೆ ಐದು ಅಂಶಗಳ ಮನೋಭಾವದಿಂದ ಭಾರತ್ ವಿಕಾಸ್ ಪರಿಷತ್ ಸಮಾಜಮುಖಿ ಸೇವಾ ಕಾರ್ಯಗಳನ್ನು ನಿರಂತರವಾಗಿ ಕೈಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಜತೆಗೆ ಸಮಾಜ ಸುಧಾರಣೆ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪದಾಧಿಕಾರಿಗಳ ಕಾರ್ಯ ಅಪಾರವಾದದ್ದು ಎಂದರು.
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಮಕ್ಕಳೆ ಎಲ್ಲ ಕ್ಷೇತ್ರಗಳಲ್ಲಿಯೂ ಅತ್ತ್ಯುನ್ನತ ಸಾಧನೆ ಮಾಡುವುದರ ಮೂಲಕ ನಗರ ಪ್ರದೇಶದ ಮಕ್ಕಳನ್ನು ಹಿಂದಿಕ್ಕಿರುವುದು ಸಂತಸದ ವಿಚಾರವಾಗಿದ್ದು, ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆದು ಹಳ್ಳಿಗಾಡಿನ ಮಕ್ಕಳು ಸಹ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಹೇಳಿದರು. ಈ ವೇಳೆ ಭಾ.ವಿ.ಪ ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ಪಿ.ಸ್ವಾಮಿ, ಕದಂಬ ಶಾಖೆ ಅಧ್ಯಕ್ಷ ಎಂ.ಮಹಾಲಿಂಗಯ್ಯ, ಮಾಜಿ ಅಧ್ಯಕ್ಷ ಪಣ್ಣೆದೊಡ್ಡಿ ಹರ್ಷ, ಭಾ.ವಿ.ಪ ತಾಲೂಕು ಅಧ್ಯಕ್ಷ ಎಲ್.ಚಂದ್ರಶೇಖರ್, ಪದಾಧಿಕಾರಿಗಳಾದ ನೈದಿಲೆ ಚಂದ್ರು, ಚಿಕ್ಕಣ್ಣ ಇತರರಿದ್ದರು.