ಜಿಲ್ಲೆ

ವಿಶೇಷ ವೇಷದಲ್ಲಿ ಗಮನ ಸೆಳೆದ ಮಕ್ಕಳು

ಧಾರವಾಡ: ನಗರದ ಶೆಟ್ಟರ್ ಕಾಲನಿಯ ಸಂಸ್ಕೃತಿ ಶಿಶು ಮಂದಿರದಲ್ಲಿ ಶುಕ್ರವಾರ ಸಡಗರದಿಂದ ಸ್ವಾಮಿ ವಿವೇಕಾನಂದ ಜಯಂತಿಯನ್ನು ಆಚರಿಸಲಾಯಿತು.
ಸ್ವಾಮಿ ವಿವೇಕಾನಂದರ ವೇಷದಲ್ಲಿ ಆಗಮಿಸಿದ ಪುಟಾಣಿಗಳು ‘ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ’ ಎಂಬ ಘೋಷಣೆ ಹೇಳುವ ಮೂಲಕ ಎಲ್ಲರ ಗಮನ ಸೆಳೆದರು. ಇದಲ್ಲದೆ ರಾಮಕೃಷ್ಣ ಪರಮಹಂಸ, ಶಾರದಾ ದೇವಿ, ತಾಯಿ ಪ್ರಭಾವತಿ ದೇವಿ, ಸಹೋದರಿ ನಿವೇದಿತಾ ವೇಷದಲ್ಲಿ ಸಹ ಆಗಮಿಸಿದ್ದ ಮಕ್ಕಳು ಮಹಾನ್ ಪುರುಷರ ಜೀವನವನ್ನು ತಿಳಿಸುವ ಪ್ರಯತ್ನ ಮಾಡಿದರು.
ಶಿಶು ಮಂದಿರದ ಸಂಚಾಲಕಿ ಮೃಣಾಲ್ ಜೋಶಿ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತದ ಧರ್ಮ ಸಂಸ್ಕೃತಿಯನ್ನು ಹೊರ ಜಗತ್ತಿಗೆ ಮುಟ್ಟುವಂತೆ ಮಾಡುವ ಮೂಲಕ ಭಾರತದ ಧಾರ್ಮಿಕ ಶಕ್ತಿಯನ್ನು ಎತ್ತಿ ಹಿಡಿದು ದೇಶದ ಕೀರ್ತಿಯನ್ನು ಜಗತ್ತಿಗೆ ತೋರಿದ್ದಾರೆ. ಇಂದಿನ ಯುವಕರು ಇಂತಹ ಮಹಾನ್ ಚೇತನರ ಆದರ್ಶ ಅಳವಡಿಸಿಕೊಂಡು ಜೀವನ ಸಾಗಿಸಬೇಕು ಎಂದರು.
ಶಿಶು ಮಂದಿರದ ಶಿಕ್ಷಕರಾದ ಸಂಗೀತಾ, ಅರುಂಧತಿ, ಅಲ್ಕಾ, ಪ್ರತಿಭಾ, ಯಶೋಧಾ, ಇತರರು ಇದ್ದರು.