ಚಿಕ್ಕಪಡಸಲಗಿ: ಸ್ಥಳೀಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆ ಮಕ್ಕಳಿಗೆ ಚಿಕ್ಕಲಕಿ ಕ್ರಾಸ್‌ದಲ್ಲಿನ ಸಮುದಾಯ ಆರೋಗ್ಯ ಕೇಂದ್ರದಿಂದ ಸೋಮವಾರ ಜಂತುಹುಳ ಮಾತ್ರೆ ವಿತರಿಸಲಾಯಿತು.
ವೈದ್ಯಾಧಿಕಾರಿ ಡಾ. ಮುಕುಂದ ಕಾಂಬಳೆ ಮಾತನಾಡಿ, ಜಂತುಹುಳು ಹೊಂದಿರುವ ಮಕ್ಕಳು ಕಡ್ಡಾಯವಾಗಿ ಮಾತ್ರೆ ತೆಗೆದುಕೊಳ್ಳಬೇಕು. ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಬಳಲುತ್ತಿರುವ ಮಕ್ಕಳು ಮಾನಸಿಕ, ದೈಹಿಕ ಬೆಳವಣಿಗೆಗೆ ತುತ್ತಾಗುತ್ತಾರೆ. ಆದ್ದರಿಂದ ಜಂತುಹಳುಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮನಸ್ಸು ತೋರಬೇಕೆಂದು ತಿಳಿಸಿದರು.
ಚಿಕ್ಕಪಡಸಲಗಿ ಸಮುದಾಯ ಆರೋಗ್ಯಾಧಿಕಾರಿ ಆನಂದ ತೇಲಸಂಗ ಮಾತನಾಡಿ, ಎಲ್ಲ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳಿಗೆ ಉಚಿತವಾಗಿ ಮಾತ್ರೆ ನೀಡಲಾಗುತ್ತದೆ. ಶಾಲೆಗಳಲ್ಲಿ ದಾಖಲಾದ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೂ ಮಾತ್ರೆ ವಿತರಿಸಲಾಗುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು. ಅಲ್ಬೆಂಡ್‌ಜೋಲ್ ಮಾತ್ರೆ ಮಕ್ಕಳಿಗೆ ಹಾಗೂ ವಯಸ್ಕರಿಗೆ ಒಂದು ಸುರಕ್ಷಿತ ಔಷಧವಾಗಿದೆ. ಇದನ್ನು ಅಗಿದು ನುಂಗಬೇಕು. ಉಸಿರುಗಟ್ಟುವುದನ್ನು ತಡೆಗಟ್ಟಲು ಶುದ್ಧ ಕುಡಿಯುವ ನೀರು ಉಪಯೋಗಸಬೇಕು ಎಂದರು.
ವಿಶ್ರಾಂತ ಹಿರಿಯ ಶಿಕ್ಷಕ ಬಸವರಾಜ ಅನಂತಪೂರ, ಪ್ರಭಾರ ಮುಖ್ಯಶಿಕ್ಷಕ ಬಸವರಾಜ ಜಾಲೋಜಿ ಮಾತನಾಡಿದರು.
ಶಿಕ್ಷಕರಾದ ಈರಪ್ಪ ದೇಸಾಯಿ, ಲೋಹಿತ ಮಿರ್ಜಿ, ಗುಲಾಬಚಂದ ಜಾಧವ, ಶ್ರೀಶೈಲ ಹುಣಸಿಕಟ್ಟಿ, ಶಿಕ್ಷಕಿಯರಾದ ಪ್ರಮೀಳಾ ತೇಲಸಂಗ, ಸಹನಾ ಕಲ್ಯಾಣಿ, ಆಶಾ ಕಾರ್ಯಕರ್ತೆಯರಾದ ಸಾವಿತ್ರಿ ನ್ಯಾಮಗೌಡ, ಮಹಾದೇವಿ ಸನಧಿ, ಶೋಭಾ ಪಾಟೀಲ, ಮಹಾದೇವಿ ಅಂಬಿ ಇತರರಿದ್ದರು.