ಜಿಲ್ಲೆ

ಮಕ್ಕಳು ಗಿಡ ನಿಟ್ಟು ಪೋಷಿಸಬೇಕು

ಕಿರಣ್ ಗೌಡ.ಜಿ

ಮದ್ದೂರು: ಪರಿಸರ ವಿನಾಶದ ಅಂಚಿಗೆ ಹೋಗುತ್ತಿರುವುದರಿಂದ ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಸಿಗುವುದಿಲ್ಲ. ಆದ್ದರಿಂದ ಶಾಲಾ ಹಂತದಲ್ಲಿ ಪ್ರತಿಯೊಬ್ಬ ಮಕ್ಕಳು ತಮ್ಮ ಹೆಸರಿನಲ್ಲಿ ಗಿಡ ನೆಟ್ಟಿ ಬೆಳೆಸುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಮಂಟೂ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಅಭಿಷೇಕ್ ತಿಳಿಸಿದರು.

ಪಟ್ಟಣದ ನಳಂದ ವಿದ್ಯಾಪೀಠ ಶಾಲಾ ಆವರಣದಲ್ಲಿ ಗುರುವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತ್ರ ಗಿಡ ನೆಡುವುದು ಬೆಳೆಸುವುದರ ಬಗ್ಗೆ ನಾವು ಜಾಗೃತಿ ಮೂಡಿಸುವುದಲ್ಲ, ವರ್ಷದ 365 ದಿನಗಳು ಗಿಡ ಬೆಳೆಸುವುದು ಹಾಗೂ ಮರ ಕಡಿಯುವುದನ್ನು ತಡೆಯುವುದರ ಮೂಲಕ ಪರಿಸರ ಉಳಿಸುವ ಜಾಗೃತಿ ಕಾರ್ಯಕ್ರಮಗಳನ್ನು ಪ್ರತಿಯೊಬ್ಬರೂ ನಿರಂತರವಾಗಿ ಮಾಡಬೇಕು ಎಂದು ತಿಳಿಸಿದರು.

ಆಹಾರ ತಜ್ಞೆ ಬಿ.ಚೈತ್ರಾ ಆಹಾರ ಪದ್ಧತಿಗಳ ಬಗ್ಗೆ ಮಾತನಾಡಿ, ಆದಷ್ಟು ಸಿರಿಧಾನ್ಯಗಳನ್ನು ಬಳಸಬೇಕು. ಮಕ್ಕಳು ಚಾರ್ಟ್ಸ್ ಹಾಗೂ ಕೆಮಿಕಲ್ ಪದಾರ್ಥಗಳನ್ನು ಸೇವಿಸುವುದು ಕಡಿಮೆ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಡಾ.ಆರ್.ರಾಮಕೃಷ್ಣ ಮಾತನಾಡಿ, ಶಾಲಾ ಹಂತದಲ್ಲಿ ಎಲ್ಲ ಮಕ್ಕಳಿಗೂ ಪರಿಸರದ ಉಳಿವಿನ ಬಗ್ಗೆ ಶಿಕ್ಷಕರು ಅರಿವು ಮೂಡಿಸುವ ಕೆಲಸ ಮಾಡಬೇಕು ಮತ್ತು ಪರಿಸರ ಮಹತ್ವದ ಬಗ್ಗೆ ತಿಳಿಸಬೇಕು ಎಂದರು.

ಪ್ರಾಂಶುಪಾಲ ಚಂದ್ರಶೇಖರ್ ಸೇರಿದಂತೆ ಇತರರು ಇದ್ದರು.