ಜಿಲ್ಲೆ

ಮಕ್ಕಳಿಗೆ ಜೈಲಿನ ಅನುಭವ ನೀಡಬಾರದು: ನಾಗಣ್ಣ ಗೌಡ

ಮಡಿಕೇರಿ: ಮಕ್ಕಳಲ್ಲಿ ಕಲಾ ಪ್ರತಿಭೆ ಸಾಕಷ್ಟು ಇದ್ದು, ಮಕ್ಕಳನ್ನು ಸದಾ ಖುಷಿಯಿಂದ ಇರಲು ಆಟೋಟಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕೆ ಹೊರತು ಜೈಲಿನ ಅನುಭವ ನೀಡಬಾರದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಪ್ರತಿಪಾದಿಸಿದರು.


ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುನಿಸೆಫ್, ಮಾನಸ, ಇಸಿಎಚ್‌ಒ ಹಾಗೂ ಸ್ಪ್ಯಾಡ್ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಬಾಲಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.


ಮಕ್ಕಳು ಮಕ್ಕಳ ತನವನ್ನು ಅನುಭವಿಸಬೇಕು. ಗ್ರಾಮೀಣ ಆಟಗಳಾದ ಮರಕೋತಿ, ಕಪ್ಪೆ ಕುಣಿತ, ಕುಂಟೆಬಿಲ್ಲೆ ಹೀಗೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಇತರ ಮಕ್ಕಳ ಜತೆ ಬೆರೆಯಲು ಸಾಧ್ಯವಾಗಲಿದೆ ಎಂದರು.


ಮಕ್ಕಳು ಮೊಬೈಲ್ ಬದಲಾಗಿ ಮಣ್ಣಿನಲ್ಲಿ ಆಟ ಆಡಬೇಕು. ಇದರಿಂದ ಮಕ್ಕಳ ಚೈತನ್ಯ ಹೆಚ್ಚಾಗಲಿದೆ. ಜತೆಗೆ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ವಿಕಸನ ಸದೃಢಗೊಳ್ಳಲಿದೆ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಕ್ರೀಡೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳುವುದು ಹೆಚ್ಚಾಗುತ್ತಿವೆ. ಇಂತಹ ಚಟುವಟಿಕೆಗಳು ಒಳ್ಳೆಯದಲ್ಲ. ಶಿಸ್ತಿನ ಹೆಸರಿನಲ್ಲಿ ನಿರ್ಬಂಧಗಳನ್ನು ಹೇರಬಾರದು. ಮಕ್ಕಳ ಹಕ್ಕುಗಳಿಗೆ ಚ್ಯುತಿಯಾಗದಂತೆ ಪಾಲಕರು ಗಮನಹರಿಸಬೇಕು ಎಂದರು.


ಬಾಲಕರ ಮತ್ತು ಬಾಲಕಿಯರ ಮಂದಿರದ ಮಕ್ಕಳು ತುಂಬಾ ಬುದ್ಧಿವಂತರಿದ್ದು, ಕ್ರೀಯಾಶೀಲರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಬಾಲ ಮೇಳವನ್ನು ರಾಜ್ಯ ಮಟ್ಟದಲ್ಲಿಯಲ್ಲಿಯೂ ಆಯೋಜಿಸಲಾಗುವುದು ಎಂದು ನಾಗಣ್ಣ ಗೌಡ ತಿಳಿಸಿದರು.


ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಯಶಂಕರ್ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳುವುದು ಅತಿಮುಖ್ಯ. ನಾವುಗಳೆಲ್ಲರೂ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಓದಿಕೊಂಡು ಮುಖ್ಯವಾಹಿನಿಗೆ ಬಂದಿದ್ದೇವೆ. ಅದೇ ರೀತಿ ಇಂದಿನ ಮಕ್ಕಳು ಸಹ ಹೆಚ್ಚಿನ ಶ್ರಮವಹಿಸಿ ಓದಿದರೆ, ಉತ್ತಮ ಭವಿಷ್ಯ ಕಾಣಬಹುದು. ಆ ನಿಟ್ಟಿನಲ್ಲಿ ಆಟದ ಜತೆ ಪಾಠಕ್ಕೆ ಹೆಚ್ವಿನ ಆದ್ಯತೆ ನೀಡಬೇಕು ಎಂದರು.


ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಶ್ಯಾಮ್ ಪ್ರಸಾದ್ ಮಾತನಾಡಿ, ಮಕ್ಕಳನ್ನು ಮೊಬೈಲ್ ದಾಸರನ್ನಾಗಿ ಮಾಡದೆ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಮಕ್ಕಳ ಜತೆ ಪಾಲಕರು ಆಟ-ಪಾಠದಲ್ಲಿ ಪಾಲ್ಗೊಂಡಾಗ ಮಕ್ಕಳ ಲವಲವಿಕೆ ಹೆಚ್ಚಾಗಲಿದೆ. ಮಗು ಊಟ ಮಾಡಲು ಮೊಬೈಲ್ ಬೇಕು ಬೇಕು ಎನ್ನುವಂತಾಗಿದೆ. ತಾಯಿಗೆ ಮಗು ಊಟ ಮಾಡಿದರೆ ಸಾಕು ಎನ್ನುವಂತೆ ಒಂದೆಡೆ ಸಂತಸ ಪಡುತ್ತಾರೆ. ಆದರೆ, ಮೊಬೈಲ್ ನೋಡಿ ಊಟ ಮಾಡುವುದರಿಂದ ಕೆಟ್ಟ ಪರಿಣಾಮ ಬೀರಲಿದೆ. ಆದ್ದರಿಂದ ಮುಂದಿನ ಜನಾಂಗವನ್ನು ಉತ್ತಮ ರೀತಿಯಲ್ಲಿ ಕೊಂಡೊಯ್ಯುವತ್ತ ಅವಲೋಕನ ಮಾಡಬೇಕಿದೆ ಎಂದರು.


ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಜಿ.ಪಂ.ಸಿಇಒ ವರ್ಣಿತ್ ನೇಗಿ, ಯುನಿಸೆಫ್ ವಿಭಾಗದ ಮಕ್ಕಳ ತಜ್ಞರಾದ ಸೋನಿ ಕುಟ್ಟಿ ಜಾರ್ಜ್, ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ಆ್ಯಂಟೋನಿ ಸಭಾಸ್ಟಿನ್, ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ಡಿವೈಎಸ್ಪಿ ಜಗದೀಶ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಕಾರ್ಮಿಕ ಇಲಾಖೆ ಅಧಿಕಾರಿಗಳು ಇತರರು ಇದ್ದರು.

೨೧೫ ಹೆಚ್ಚು ವಿದ್ಯಾರ್ಥಿಗಳು ಭಾಗಿ
ಬಾಲ ಮೇಳ ಕಾರ್ಯಕ್ರಮಕ್ಕೆ ಮಕ್ಕಳು ಚಾಲನೆ ನೀಡಿದರು. ಬಾಲ ಮೇಳ ಕಾರ್ಯಕ್ರಮದಲ್ಲಿ ಬಾಲಕರ, ಬಾಲಕಿಯರ ಮಂದಿರ, ವಿವಿಧ ಆಶ್ರಮ ಶಾಲೆಯ ೨೧೫ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸಿಂಹದ ಬಾಯಿಗೆ ಚೆಂಡು ಎಸೆಯುವುದು, ಬಾಸ್ಕೇಟ್ ಬಾಲ್ ಆಟ, ಬಕೆಟ್‌ಗೆ ನಾಣ್ಯ ಇಡುವುದು, ಲಕ್ಕಿ ರಿಂಗ್ಸ್ ಹೀಗೆ ೧೦ಕ್ಕೂ ಹೆಚ್ಚು ಕ್ರೀಡೆಗಳಲ್ಲಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ಪಾಲ್ಗೊಂಡು ಸಂತಸ ಪಟ್ಟರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಸ್ತು ಪ್ರದರ್ಶನ ಏರ್ಪಡಿಸುವುದರ ಜತೆಗೆ ಮಕ್ಕಳಿಗೆ ಆರೋಗ್ಯ ತಪಾಸಣಾ ಕಾರ್ಯಕ್ರಮ ನಡೆಯಿತು. ಸಂವಿಧಾನ ದಿನಾಚರಣೆ ಪ್ರಯುಕ್ತ ಸಂವಿಧಾನದ ಮಹತ್ವದ ಬಗ್ಗೆ ವಸ್ತು ಪ್ರದರ್ಶನ ಮಳಿಗೆ ಗಮನ ಸೆಳೆಯಿತು.