ರಾಯಚೂರು: ಮಕ್ಕಳ ಮನಸ್ಸು ಬಿಳಿಯ ಕಾಗದ ಹಾಳೆಯಿದ್ದಂತೆ. ಹೀಗಾಗಿ ಅವರಿಗೆ ಉತ್ತಮ ವಿಚಾರ, ವಿಷಯಗಳನ್ನು ತಿಳಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ಶಿಕ್ಷಕ ಮುರಳೀಧರ ರೆಡ್ಡಿ ಹೇಳಿದರು.
ಸ್ಥಳೀಯ ತಾಲೂಕು ಆರೋಗ್ಯಾಕಾರಿ ಸಭಾಂಗಣದಲ್ಲಿ ಪಂ.ತಾರಾನಾಥ ಸಾಂಸ್ಕೃತಿಕ ವೇದಿಕೆ ಮತ್ತು ಎಐಡಿಎಸ್‌ಒ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.
ಮಕ್ಕಳಿಗೆ ಆದರ್ಶ ವ್ಯಕ್ತಿಗಳ ವಿಚಾರಧಾರೆಗಳನ್ನು ತಿಳಿಸುವುದ ಜತೆಗೆ ಅವರಲ್ಲಿ ಕಲಿಯುವ ಆಸಕ್ತಿಯನ್ನು ಬೆಳೆಸಬೇಕು. ಅಂದಾಗ ಮಾತ್ರ ಅವರ ವ್ಯಕ್ತಿತ್ವ ಬೆಳೆಯುವುದರ ಜತೆಗೆ ಜತೆಗೆ ಕಲಿಕೆಯಲ್ಲಿ ಆಸಕ್ತಿ ಬೆಳೆಯುತ್ತದೆ ಎಂದು ಹೇಳಿದರು.
ಶಿಕ್ಷಕಿ ಅರುಣಾಬಾಯಿ ಮಾತನಾಡಿ, ಶಿಬಿರದಲ್ಲಿ ಮಕ್ಕಳು ಕ್ರಿಯಾಶೀಲರಾಗಿ ಪಾಲ್ಗೊಂಡಿದ್ದು, ಅವರಲ್ಲಿ ವಿಭಿನ್ನವಾದ ಆಸಕ್ತಿ, ಪ್ರತಿಭೆಗಳನ್ನು ಕಾಣಬಹುದಾಗಿದೆ. ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಹಯ್ಯಳಪ್ಪ ಮಾತನಾಡಿ, ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದ್ದು, ಮಕ್ಕಳಲ್ಲಿನ ಆಸಕ್ತಿಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುವ ಕೆಲಸವನ್ನು ಪಾಲಕರು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಪಂ.ತಾರಾನಾಥ ಸಾಂಸ್ಕೃತಿಕ ವೇದಿಕೆ ಕಾರ್ಯದರ್ಶಿ ಸರೋಜಾ ಗೋನ್ವಾರ, ಎಐಡಿವೈಒ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್, ಶಿಕ್ಷಕರಾದ ಗಾಯತ್ರಿ, ಶ್ರೀನಿವಾಸ, ಆರೋಗ್ಯ ಇಲಾಖೆಯ ಸಂಧ್ಯಾ ಉಪಸ್ಥಿತರಿದ್ದರು.