ಮಡಿಕೇರಿ: ಮಕ್ಕಳು ಓದಿನೊಂದಿಗೆ ಸಾಹಿತ್ಯ ಕ್ಷೇತ್ರದತ್ತಲೂ ಒಲವು ತೋರಬೇಕೆಂದು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಬಿ.ಜಿ.ಅನಂತಶಯನ ಹೇಳಿದರು.
ಕನ್ನಡ ಸಿರಿ ಸ್ನೇಹ ಬಳಗ ಹಾಗೂ ಮಡಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮಾಚರಣೆ ಅಂಗವಾಗಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಾಹಿತಿ ದಿ.ಜಿ.ಟಿ.ನಾರಾಯಣ ರಾವ್ ಅವರ ಬದುಕು ಬರಹ ಕುರಿತ ಉಪನ್ಯಾಸ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿದ್ಯಾರ್ಥಿಗಳು ಪ್ರಶ್ನಿಸುವ, ಉತ್ತರಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಎಲ್ಲರಿಗೂ ಸ್ವಾತಂತ್ರ್ಯವಿದ್ದು, ಉಪಯೋಗಿಸಿಕೊಳ್ಳಬೇಕೆಂದು ಹೇಳಿದ ಅವರು, ಪ್ರಪಂಚದಲ್ಲಿ ಲೋಕದೊಳಗಡೆ ಮತ್ತಷ್ಟು ಲೋಕಗಳಿವೆ. ಕ್ರೀಡೆ, ಸಾಹಿತ್ಯ, ಸಂಗೀತ, ಪಾಪಿಗಳ ಲೋಕ ಕೂಡ ಇದೆ. ಅದರಲ್ಲಿ ಅಧ್ಯಾತ್ಮಿಕ ಲೋಕ ಚೆನ್ನಾಗಿದೆ. ಧ್ಯಾನದಿಂದ ಸ್ಥಿರತೆ, ಅನಂತತೆಯನ್ನು ಸಾಧಿಸಬಹುದಾಗಿದೆ. ಆದ್ದರಿಂದ ಮಕ್ಕಳು ಓದಿನೊಂದಿಗೆ ಸಾಹಿತ್ಯದತ್ತ ಒಲವು ತೋರಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಡಿಕೇರಿ ನಗರಸಭಾ ಸದಸ್ಯ ಕೆ.ಎಸ್.ರಮೇಶ್, ನಾರಾಯಣ ರಾವ್ ಜಿ.ಟಿ.ಎನ್ ಎಂದೇ ಪ್ರಸಿದ್ಧರಾಗಿದ್ದರು. ಬೋಧಕರಾಗಿ ಹಲವಾರು ವಿದ್ಯಾರ್ಥಿ, ಸಾಹಿತಿಗಳ ಬಳಗವನ್ನು ಹೊಂದಿದ್ದರು. ಇಂತಹ ಸಾಧಕರ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಎನಾದರೂ ಸಾಧನೆ ಮಾಡಿದರೆ ಅವರ ಹೆಸರು ಶಾಶ್ವತವಾಗಿ ಉಳಿಯುತ್ತದೆ. ವಿದ್ಯಾರ್ಥಿಗಳು ಕೂಡ ಸಾಧನೆ ಮಾಡಬಹುದು. ಈಗಿನಿಂದಲೇ ಸಣ್ಣ ಪುಟ್ಟ ಕವನಗಳನ್ನು ಬರೆಯುತ್ತಾ ಮುಂದೊಂದು ಪುಸ್ತಕವಾಗಿ ಪ್ರಕಟ ಮಾಡಬಹುದು. ಸಾಹಿತ್ಯದತ್ತಲೂ ಒಲವು ತೋರಬೇಕೆಂದು ಹೇಳಿದರು. ಕನ್ನಡ ಸಿರಿ ಸ್ನೇಹ ಬಳಗ ಸಾಹಿತ್ಯ ಪರಿಷತ್ತು ಮಾಡುವ ಚಟುವಟಿಕೆಗಳಿಗಿಂತಲೂ ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಕರ್ತ ಕುಡೆಕಲ್ ಸಂತೋಷ್ ಮಾತನಾಡಿ, ವಿದ್ಯಾರ್ಥಿಗಳು ಓದಿನೊಂದಿಗೆ ಇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ಕ್ರೀಡೆ, ಕಲೆ, ಸಂಗೀತ ಹೀಗೆ ಹಲವಾರು ಕ್ಷೇತ್ರಗಳಿದ್ದು, ಯಾವುದರಲ್ಲಾದರೂ ತೊಡಗಿಸಿಕೊಂಡರೆ ಬುದ್ಧಿಶಕ್ತಿಯೊಂದಿಗೆ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಾಹಿತ್ಯದಲ್ಲಿ ತೊಡಗಿಸಿಕೊಂಡರೆ ಜ್ಞಾನಾರ್ಜನೆಯೊಂದಿಗೆ ವಿಷಯದ ಗ್ರಹಿಕೆಯಾಗುತ್ತದೆ. ಸರ್ಕಾರಿ ಶಾಲೆ ಎಂಬ ಕೀಳರಿಮೆ ಬೇಡ, ಸರಕಾರಿ ಶಾಲೆಯ ಬೋಧಕರು ತಿಳಿದವರು, ಜ್ಞಾನವುಳ್ಳವರು ಆಗಿರುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದು ಹೇಳಿದರು.
ಸಾಹಿತಿ ಕಿಗ್ಗಾಲು ಗಿರೀಶ್ ಮಾತನಾಡಿ, ಕೊಡಗಿನಲ್ಲಿ ಸಾಹಿತ್ಯದ ಅಭಿರುಚಿಯಿಲ್ಲ ಎಂಬ ಮಾತು ಇತ್ತು. ಆದರೆ ಅದು ಸುಳ್ಳು ಎಂಬದಕ್ಕೆ ಇತ್ತೀಚಿನ ದಿನಗಳಲ್ಲಿ ತಿಂಗಳಿಗೆ ಎರಡು, ಮೂರು ಕೃತಿಗಳು ರಚನೆಯಾಗುತ್ತಿರುವುದೇ ಸಾಕ್ಷಿ. ಸಾಹಿತ್ಯ ರಚನೆ ಕಬ್ಬಿಣದ ಕಡಲೆ ಏನಲ್ಲ, ಏಕಾಗ್ರತೆ, ಹಾಗೂ ಮನಸು ಇದ್ದರೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವದರೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳುವಂತೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ್ ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ನಡೆಸುವದರಿಂದ ಮಹನೀಯರ ಪರಿಚಯವಾಗುವುದರೊಂದಿಗೆ ಮಕ್ಕಳಲ್ಲಿ ಸಾಹಿತ್ಯದ ಅರಿವು ಮೂಡುತ್ತದೆ. ಕಾರ್ಯಕ್ರಮಕ್ಕೆ ಬರುವ ಅತಿಥಿಗಳ ಪರಿಚಯವೂ ಆಗುತ್ತದೆ. ಇದೊಂದು ಸೌಭಾಗ್ಯವೆಂದು ಹೇಳಿದರು.
ನಾರಾಯಣ ರಾವ್ ಅವರ ಬದುಕು ಬರಹದ ಬಗ್ಗೆ ಜಯಲಕ್ಷ್ಮಿ ಉಪನ್ಯಾಸ ನೀಡಿದರೆ, ಸ್ನೇಹ ಸಿರಿ ಬಳಗದ ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಿಗ್ಗಾಲು ಗಿರಿಶ್ ಅವರು ಬರೆದ ಕಳೆದುಕೊಂಡವನು ಮತ್ತು ಇತರ ಕತೆಗಳು ಕೃತಿಯನ್ನು ಬಿ.ಜಿ.ಅನಂತಶಯನ ಅವರು ಬಿಡುಗಡೆ ಮಾಡಿದರು. ಕಾಲೇಜಿನ ಪ್ರಾಂಶುಪಾಲ ವಿಜಯ ಅವರನ್ನು ಬಳಗದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರೆ, ಉಪನ್ಯಾಸಕ ಚಿದಾನಂದ ಸ್ವಾಗತಿಸಿ, ಉಪನ್ಯಾಸಕಿ ಪೂರ್ಣಿಮಾ ನಿರೂಪಿಸಿದರೆ, ಕವಿ ಪಿ.ಎಸ್.ವೈಲೇಶ್ ವಂದಿಸಿದರು.