ಜಿಲ್ಲೆ

ಶಾಲೆಗೆ ಹೋಗಲು ಸಜ್ಜಾದ ಮಕ್ಕಳು

ಉತ್ತರ ಕನ್ನಡ ಡೆಸ್ಕ್

ಕಾರವಾರ: ಎರಡು ತಿಂಗಳ ಬೇಸಿಗೆ ರಜೆಯ ಬಳಿಕ ಮಕ್ಕಳು ಮತ್ತೆ ಹೆಗಲಿಗೆ ಬ್ಯಾಗ್ ಹಾಕಲು ಸಜ್ಜಾಗಿದ್ದಾರೆ. ಹೊಸ ಯುನಿಾರ್ಮ್ ಪಡೆದು ಶಾಲೆಗೆ ಮರಳಲು ಸಿದ್ಧರಾಗಿದ್ದಾರೆ.

ಮೇ 29ರಿಂದ ಶಾಲೆಗಳು ಪ್ರಾರಂಭಿಸಲು ಸಿದ್ಧತೆ ನಡೆಸಿದ್ದು, ಈಗಾಗಲೇ ಶೇ. 99ರಷ್ಟು ಪಠ್ಯ, ಪುಸ್ತಕ ಹಾಗೂ ಸಮವಸಗಳು ಈ ಬಾರಿ ಪೂರೈಕೆಯಾಗಿರುವುದು ಮಕ್ಕಳಲ್ಲಿ ಸಂತಸ ತಂದಿದೆ. ಅಲ್ಲದೆ, ಅತಿಥಿ ಶಿಕ್ಷಕರ ನೇಮಕಕ್ಕೂ ಆದೇಶವಾಗಿದೆ.

ಈ ಹಿಂದೆ ಉಂಟಾಗುತ್ತಿದ್ದ ಸಮಸ್ಯೆಗಳನ್ನು ಶಿಕ್ಷಣ ಇಲಾಖೆ ಮೊದಲೇ ಗುರುತಿಸಿ ಅದನ್ನು ಪರಿಹರಿಸಿರುವುದು ಸ್ವಾಗತಾರ್ಹ. ಎರಡು ದಿನಗಳ ಸಿದ್ಧತೆಯ ನಂತರ ಮೇ 31ರಂದು ಪ್ರಾರಂಭೋತ್ಸವ ಜರುಗಲಿದ್ದು, ಅಂದು ತಳಿರು, ತೋರಣ ಕಟ್ಟಿ ಮಕ್ಕಳಿಗೆ ಬಿಸಿಯೂಟ ನೀಡಲು ಸಿದ್ಧತೆ ಮಾಡಿಕೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆ ಶಿಕ್ಷಕರಿಗೆ ಸೂಚನೆ ನೀಡಿದೆ.

ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 47,171 ಸಮವಸ್ತ್ರಗಳ ಬೇಡಿಕೆಯಿದ್ದು, 45,641 ಸಮವಸ್ತ್ರಗಳು ಪೂರೈಕೆಯಾಗಿದೆ. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 71,906 ವಿದ್ಯಾರ್ಥಿಗಳಿಗೆ ಸಮವಸ ಈಗಾಗಲೇ ಪೂರೈಸಲಾಗಿದೆ. ಮಕ್ಕಳಿಗೆ ವಿತರಣೆ ಕೂಡ ಆಗಿದೆ. ಹೀಗಾಗಿ, ಆದಷ್ಟು ಶಾಲಾ ಪ್ರಾರಂಭೋತ್ಸವಕ್ಕೆ ಸಮವಸ್ತ್ರ ಧರಿಸಿಕೊಂಡು ಬರುವಂತೆ ಮಕ್ಕಳಿಗೆ ಸೂಚಿಸಲಾಗಿದೆ ಎಂದು ಡಿಡಿಪಿಐಗಳು ತಿಳಿಸಿದ್ದಾರೆ.

ರಜೆಯಲ್ಲೇ ಪುಸ್ತಕ: ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 4,81,197 ಪಠ್ಯ ಪುಸ್ತಕ ಅಗತ್ಯವಿದ್ದು, 4,82,789 ಪೂರೈಕೆಯಾಗಿದ್ದು, ವಿತರಣೆ ಕೂಡ ಆಗಿದೆ. ರಜೆಯ ಮಧ್ಯಭಾಗದಲ್ಲಿ ಪುಸ್ತಕಗಳನ್ನು ಮಕ್ಕಳಿಗೆ ನೀಡಲಾಗಿದೆ. ಆದರೆ, ಅದಕ್ಕೂ ಮುಂಚೆಯೇ ಹಿರಿಯ ವಿದ್ಯಾರ್ಥಿಗಳಿಂದ ಪುಸ್ತಕ ವಾಪಸ್ ಪಡೆದು ಕಿರಿಯರಿಗೆ ವಿಸ್ತರಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ರಜೆಯಲ್ಲಿ ವಿದ್ಯಾರ್ಥಿಗಳ ಆಟದ ಜತೆ ಪಾಠಕ್ಕೂ ಒತ್ತು ನೀಡಲು ಅನುಕೂಲವಾಗಿದೆ ಎನ್ನುತ್ತಾರೆ ಕಾರವಾರ ಡಿಡಿಪಿಐ ಈಶ್ವರ ನಾಯ್ಕ.

ಪ್ರಾರಂಭೋತ್ಸಕ್ಕೆ ಸಿದ್ಧತೆ

  • ಎಸ್‌ಡಿಎಂಸಿಗಳ ಸಭೆ ನಡೆಸಿ, ಪ್ರಾರಂಭೋತ್ಸವ ಹಾಗೂ ಶಾಲೆಗಳ ಚಟುವಟಿಕೆಗಳ ಮಾಹಿತಿ ನೀಡಲು ಸೂಚನೆ
  • ಬಿಸಿಯೂಟ ತಯಾರಿಕೆಗೆ ಬೇಕಾದ ಸಿಲಿಂಡರ್, ಆಹಾರ ಧಾನ್ಯಗಳನ್ನು ಪೂರೈಸಿ ಸಿದ್ಧವಿಟ್ಟುಕೊಳ್ಳಲು ಮುಖ್ಯ ಶಿಕ್ಷಕರಿಗೆ ಸೂಚನೆ
  • ಶಾಲಾ ಶೈಕ್ಷಣಿಕ ದಾಖಲಾತಿಗೆ ಸಿದ್ಧತೆ, ಶಾಲಾ ಪ್ರಾರಂಭೋತ್ಸವ ಸಂಬಂಧ ಮುಖ್ಯ ಶಿಕ್ಷಕರ ಸಭೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶ
  • ಈಗಾಗಲೇ ಸಿಆರ್‌ಪಿ, ಬಿಆರ್‌ಪಿ, ಇಸಿಒಗಳ ಸಭೆ ನಡೆಸಲು ಸೂಚನೆ ನೀಡಲಾಗಿದೆ.

ಅತಿಥಿ ಶಿಕ್ಷಕರ ನೇಮಕಕ್ಕೂ ಆದೇಶ

ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 586 ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ 86 ಪ್ರೌಢಶಾಲಾ ಶಿಕ್ಷಕರ ಕೊರತೆ ಇದ್ದು, ಆ ಸ್ಥಾನಗಳಿಗೆ ಅತಿಥಿ ಶಿಕ್ಷಕರ ನೇಮಕಕ್ಕೆ ಈಗಾಗಲೇ ಆದೇಶ ನೀಡಲಾಗಿದೆ. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಖಾಲಿ ಇರುವ 250 ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರು ಹಾಗೂ 32 ಪ್ರೌಢಶಾಲಾ ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶ ಮಾಡಲಾಗಿದೆ. ಇದರಿಂದ ಮೊದಲ ದಿನದಿಂದಲೇ ಕಲಿಕೆಗೆ ಅನುಕೂಲವಾಗಲಿದೆ.

ಕುಡಿಯುವ ನೀರಿಗೆ ಸಮಸ್ಯೆ

ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುವಂಥ ಯಾವುದೇ ಶಾಲೆಯನ್ನು ಗುರುತಿಸಿಲ್ಲ. ಆದರೆ, ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಶಿರಸಿಯ-23, ಸಿದ್ದಾಪುರದ-26, ಯಲ್ಲಾಪುರದ-6, ಮುಂಡಗೋಡಿನ-5, ಹಳಿಯಾಳದ-17, ಜೊಯಿಡಾದ-18 ಶಾಲೆ ಸೇರಿ 94 ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲೆಲ್ಲ ನೀರು ಪೂರೈಕೆ ಮಾಡುವಂತೆ ಸಂಬಂಧಪಟ್ಟ ತಾಪಂ ಇಒ ಹಾಗೂ ಗ್ರಾಪಂ ಪಿಡಿಒಗಳಿಗೆ ಮನವಿ ಮಾಡಲಾಗಿದೆ ಎಂದು ಶಿರಸಿ ಡಿಡಿಪಿಐ ಪಿ. ಬಸವರಾಜ್ ತಿಳಿಸಿದ್ದಾರೆ.

ಶಾಲಾ ಪ್ರಾರಂಭೋತ್ಸವಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಮವಸ, ಪಠ್ಯಪುಸ್ತಕ ಪೂರೈಕೆಯಾಗಿದೆ. ಮೇ 31ರಂದು ಶಾಲೆಗಳಲ್ಲಿ ತೋರಣ ಕಟ್ಟಿ ಸಿಹಿಯೂಟ ಮಾಡಿ ಹಾಕುವಂತೆ ಸೂಚನೆ ನೀಡಲಾಗಿದೆ.ಈಶ್ವರ ನಾಯ್ಕಡಿಡಿಪಿಐ ಕಾರವಾರ