ಜಿಲ್ಲೆ

ಕನ್ನಡಾಭಿಮಾನ ಭಾಷೆಗೆ ಸೀಮಿತ ಬೇಡ

ಸಾಗರ: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತ್ಯ, ಪುಸ್ತಕ ಹಾಗೂ ವಿಷಯಗಳ ಬಗ್ಗೆ ಸಂವಹನ ಹೆಚ್ಚಾಗಬೇಕು. ಸ್ಥಳೀಯ ಕಲಾವಿದರು, ಕೃತಿಕಾರರ ಕೃತಿಗಳನ್ನು ಮನನ ಮಾಡುವಂತಹ, ಓದುವಂತಹ ಪರಂಪರೆ ಬೆಳೆಯಬೇಕು ಎಂದು ಸಾಗರ ತಾಲೂಕು ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಎಸ್.ಮೋಹನಮೂರ್ತಿ ಅಭಿಪ್ರಾಯಪಟ್ಟರು.

ನಗರದಲ್ಲಿ ಶುಕ್ರವಾರ ಆರಂಭವಾದ ಮೂರು ದಿನಗಳ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೈದ್ಧಾಂತಿಕ ಹೋರಾಟ, ಚಳವಳಿಗಳನ್ನು ಹುಟ್ಟುಹಾಕಿದ್ದು ಶಿವಮೊಗ್ಗ ಜಿಲ್ಲೆ. ಅದರಲ್ಲಿಯೂ ಸಾಗರ ತಾಲೂಕು ಕಾಗೋಡು ಚಳವಳಿ ನಡೆಸಿ ಉಳುವವನೇ ಹೊಲದೊಡೆಯ ಕಾಯ್ದೆ ಜಾರಿಗೆ ತಂದಿತು. ಇಂತಹ ಸಾಗರದಲ್ಲಿ ಕನ್ನಡವನ್ನು ವ್ಯವಸ್ಥಿತವಾಗಿ ಕಟ್ಟುವ ಕೆಲಸ ಇಲ್ಲಿಂದಲೇ ಆರಂಭವಾಗಬೇಕು ಎಂದು ಆಶಿಸಿದರು.

ಕನ್ನಡಾಭಿಮಾನ ಭಾಷೆಗೆ ಮಾತ್ರ ಸೀಮಿತ ಆಗಬಾರದು. ಸರ್ವತೋಮುಖ ಅಭಿವೃದ್ಧಿಯ ಬಗ್ಗೆಯೂ ಚಿಂತನೆ ನಡೆಸಬೇಕು. ನಮ್ಮ ಅರಿವು ವಿಸ್ತರಿಸಿಕೊಳ್ಳಲು ಆಧುನಿಕವಾಗಿ ಸಾಕಷ್ಟು ಮಾಧ್ಯಮಗಳು ಇಂದು ತೆರೆದುಕೊಂಡಿವೆ. ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾದರೂ ಮೊಬೈಲ್ ಮಾಯೆ ನಮ್ಮ ಜಗತ್ತನ್ನು ಅಂಗೈಯಲ್ಲೇ ತೋರುವಂತೆ ಮಾಡಿದೆ. ಮಕ್ಕಳಲ್ಲಿ ಓದುವ ಅಭಿರುಚಿಯನ್ನು ಬೆಳೆಸುವುದು ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ. ನಾಡು, ನುಡಿಯ ಬಗ್ಗೆ ಸದಾ ಕಾಳಜಿಯನ್ನಿಟ್ಟುಕೊಂಡು ಬದುಕೋಣ. ಕನ್ನಡ ಭಾಷೆಗೆ ಜೀವ ಚೈತನ್ಯ ತುಂಬುವ ಶಕ್ತಿ ಇದೆ ಎಂದು ಹೇಳಿದರು.

ರಂಗಮಂದಿರ ನಿರ್ವಾಣವಾಗಲಿ: ಸಾಗರ ತಾಲೂಕು ಐತಿಹಾಸಿಕ ಮತ್ತು ಸಾಹಿತ್ಯ ಕೇಂದ್ರವಾಗಿದ್ದು ಸಾಗರದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಸುಸಜ್ಜಿತ ರಂಗಮಂದಿರ ಹಾಗೂ ಮಾಹಿತಿ ಕೇಂದ್ರ ನಿರ್ವಣವಾಗಬೇಕು ಎಂದು ಪ್ರತಿಪಾದಿಸಿದ ಎಸ್.ಮೋಹನಮೂರ್ತಿ, ಸಾಗರದ ಇತಿಹಾಸ ತಿಳಿಸುವಲ್ಲಿ ಸುತ್ತಮುತ್ತಲಿನ ಪ್ರದೇಶಗಳು ಸಹಕಾರಿಯಾಗಿವೆ. ಸಾಗರ ನಗರದ ದೃಷ್ಟಿಯಿಂದ ನೋಡಿದರೆ ಹಿರಿಯ ಸಾಹಿತಿಗಳ ಸ್ಮಾರಕ ಅಥವಾ ದೇಶವನ್ನು ಮುನ್ನಡೆಸಿಕೊಂಡು ಬಂದ ರಾಷ್ಟ್ರೀಯ ನಾಯಕರ ಸ್ಮಾರಕಗಳ ಕೊರತೆ ಎದ್ದು ಕಾಣುತ್ತದೆ. ಮಕ್ಕಳಲ್ಲಿ ಇತಿಹಾಸದ ದರ್ಶನವನ್ನು ಮಾಡಿಸಲು ನಾವುಗಳು ಸೋತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಪ್ರದೇಶಗಳ ಇತಿಹಾಸದ ಪರಿಚಯ, ಸಾಹಿತಿ ಕವಿಗಳ ಪರಿಚಯ, ಸಾಹಿತ್ಯ ಕೃತಿಗಳ ಪರಿಚಯ ಕೂಡ ಶಿಕ್ಷಣ ಸಂಸ್ಥೆಗಳು, ಜನಪ್ರತಿನಿಧಿಗಳು ಮಾಡುವ ಹೊಣೆ ಹೊರಬೇಕಾಗಿದೆ. ಸಾಗರ ಸಾಹಿತ್ಯ, ಸಾಂಸ್ಕೃತಿಕ ನೆಲೆಯಾದರೂ ಒಂದು ಸುಸಜ್ಜಿತ ರಂಗಮಂದಿರ ಈವರೆಗೂ ಆಗಿಲ್ಲ. ಅದಕ್ಕೆ ಬೇಕಾದ ತಯಾರಿ ನಡೆಯಬೇಕು ಎಂದು ಹೇಳಿದರು.

ನಾಡಿನ ಖ್ಯಾತ ಸಾಹಿತಿ ಡಾ. ನಾ.ಡಿಸೋಜ ನಮ್ಮ ಊರಿನವರು. ಮ್ಯಾಗ್ಸಸೆ ಪುರಸ್ಕೃತ ದಿವಂಗತ ಕೆ.ವಿ.ಸುಬ್ಬಣ್ಣ ಅವರು ಆರಂಭಿಸಿದ ನೀನಾಸಂ ಚಟುವಟಿಕೆ, ಈಗ ಅದನ್ನು ಕೆ.ವಿ.ಅಕ್ಷರ ಅವರು ಮುಂದುವರಿಸಿಕೊಂಡು ಬರುತ್ತಿರುವುದು. ಪ್ರಸನ್ನ ಅವರು ಗ್ರಾಮೀಣ ಮಹಿಳೆಯರಿಗೆ ‘ಚರಕ’ ಉದ್ಯೋಗ ಸೃಷ್ಟಿಸಿರುವುದು ತಾಲ್ಲೂಕಿನ ಹೆಮ್ಮೆಯ ಸಂಗತಿಗಳು ಎಂದು ಬಣ್ಣಿಸಿದರು.