ಕಾರ್ಕಳ: ಎಲ್ಲ ಶಾಲೆಗಳ ಮಕ್ಕಳು ಸ್ವಾತಂತ್ರ್ಯದ ಸಂಭ್ರಮಾಚರಣೆಯಲ್ಲಿರುವಾಗ ಕಾರ್ಕಳದ ಬಜಗೋಳಿ ಸಮೀಪ ಮುಡಾರು ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಧ್ವಜಸ್ತಂಭದ ಮುಂದೆ ಕುಳಿತು ಪ್ರತಿಭಟಿಸುತ್ತಿದ್ದರು.
ಮುಡಾರು ಗ್ರಾಮದಲ್ಲಿ 70 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿದ ಸರ್ಕಾರಿ ಶಾಲೆಯ ಅನತಿ ದೂರದಲ್ಲಿ ಖಾಸಗಿ ಕಟ್ಟಡದಲ್ಲಿ ಬಾರೊಂದು ತೆರೆಯುವುದಕ್ಕೆ ಸಿದ್ಧತೆ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಬಾರ್ ಪ್ರಾರಂಭಿಸಲು ಅವಕಾಶ ಕೊಡುವುದಿಲ್ಲ ಎಂದು ಶಾಲಾ ಮಕ್ಕಳು ಮಂಗಳವಾರ ರಾಷ್ಟ್ರಧ್ವಜ ಹಾರುತ್ತಿದ್ದ ಧ್ವಜಸ್ತಂಭದ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು. 300ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಧ್ವಜಸ್ತಂಭದ ಬಳಿಯೇ ಕುಳಿತಿದ್ದರು.
ಪವಿತ್ರ ದೇವಾಲಯದಂತಿರುವ ಶಾಲೆ ಮುಂಭಾಗ ಬಾರ್ ತೆರೆಯಲು ಅಬಕಾರಿ ಇಲಾಖೆ ಪರವಾನಗಿ ನೀಡಿದೆ. ಶಾಲಾಭಿವೃದ್ಧಿ ಸಮಿತಿ, ಪಾಲಕರು ಸ್ಥಳೀಯ ಪಂಚಾಯಿತಿಯಿಂದ ಹಿಡಿದು ಜಿಲ್ಲಾಧಿಕಾರಿಗೂ ಇದರ ವಿರುದ್ಧ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಅಬಕಾರಿ ಸಚಿವರು, ಶಿಕ್ಷಣ ಸಚಿವರಿಗೆ ಹಾಗೂ ಮುಖ್ಯಮಂತ್ರಿಗೆ ಈಗಾಗಲೇ ಮನವಿ ನೀಡಿದ್ದು ಯಾವುದೇ ಸ್ಪಂದನೆ ಇಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ. ಏನೇ ಆದರೂ ಬಾರ್ ತೆರೆಯಲು ಅವಕಾಶ ನೀಡುವುದಿಲ್ಲ. ಕೂಡಲೇ ಈ ನಿರ್ಧಾರ ಹಿಂದೆಗೆದುಕೊಳ್ಳಬೇಕೆಂದು ಮಕ್ಕಳು ಪಟ್ಟು ಹಿಡಿದರು. ಪ್ರತಿಭಟನೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಪಾಲಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.