ಶಿವಮೊಗ್ಗ: ಪ್ರತಿ ದಿನ ಕೊಠಡಿಯೊಳಗೆ ಕುಳಿತು ಪಾಠ ಕೇಳುತ್ತಿದ್ದ ಮಕ್ಕಳು ಕೆಸರು ಗದ್ದೆಗೆ ಇಳಿದರು. ಹದಗೊಳಿಸಿದ ಗದ್ದೆಯಲ್ಲಿ ನೆಟ್ಟಿ (ನಾಟಿ) ಮಾಡುವ ಮೂಲಕ ಹೊಸ ಅನುಭವ ತಮ್ಮದಾಗಿಸಿಕೊಂಡರು. ಕೇವಲ ಪಠ್ಯದಲ್ಲಿ ಕೇಳುವುದು ಮಾತ್ರವಲ್ಲ, ಅದನ್ನು ಪ್ರಾಯೋಗಿಕವಾಗಿ ಮಾಡಿದಾಗ ಅದರ ಮಹತ್ವ ಅರಿವಿಗೆ ಬರುತ್ತದೆ ಎಂಬುದನ್ನು ಮನಗಂಡರು. ನಾಲ್ಕು ಗೋಡೆಯ ಕಲಿಕೆಯ ಜತೆಗೆ ಪ್ರಕೃತಿಯೊಂದಿಗೆ ಒಡನಾಡಿ ಮಾಡುವ ಕೆಲಸವು ಹೊಸ ಅನುಭವ ನೀಡುತ್ತದೆ ಎಂಬುದನ್ನು ಸ್ವತಃ ಕಂಡುಕೊಂಡರು.
ನಮ್ಮ ಸಂಸ್ಕೃತಿ, ಪರಂಪರೆ, ಸಂಸ್ಕಾರವನ್ನು ನವ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ತೀರ್ಥಹಳ್ಳಿ ತಾಲೂಕು ಚಿಟ್ಟೆಬೈಲಿನ ಪ್ರಜ್ಞಾಭಾರತಿ ಶಾಲೆಯಲ್ಲಿ ಆಗೀಗ ಹೊಸ ಪ್ರಯತ್ನಗಳು ನಡೆಯುತ್ತವೆ. ಅವುಗಳ ಪೈಕಿ ಅನ್ನದ ಅರಿವು ಕಾರ್ಯಕ್ರಮವೂ ಒಂದು. ಕಳೆದ ಐದು ವರ್ಷಗಳಿಂದ ಈ ಕಾರ್ಯಕ್ರಮ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಅದರ ಮುಂದುವರಿದ ಭಾಗವಾಗಿ ನಡೆದಿದ್ದೇ ನಾಟಿ ಕಾರ್ಯ.
ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನದ ಸಹಯೋಗದಲ್ಲಿ ನಡೆದ ಅನ್ನರ ಅರಿವು ಕಾರ್ಯಕ್ರಮದಲ್ಲಿ ಪ್ರಜ್ಞಾಭಾರತಿಯ 130 ಮಕ್ಕಳು ಭಾಗವಹಿಸಿದ್ದರು. ನಾಟಿ ಕಾರ್ಯದಲ್ಲಿ ತೊಡಗಿದ್ದ ನುರಿತ ಕೃಷಿ ಕಾರ್ಮಿಕರಿಗೆ ಪೈಪೋಟಿ ನೀಡುವಂತೆ ಮಕ್ಕಳೂ ನಾಟಿ ಮಾಡಿದರು. ಕೆಸರು ಗದ್ದೆ, ಸುರಿಯುವ ಮಳೆಯಲ್ಲಿ ಹೊಸ ಅನುಭವ ತಮ್ಮದಾಗಿಸಿಕೊಂಡರು.
ಈ ವೇಳೆ ಪ್ರತಿಷ್ಠಾನದ ವಿಶ್ವಸ್ತ ಶ್ರೀವತ್ಸ ಚಕ್ಕೋಡಬೈಲು ಮಕ್ಕಳಿಗೆ ಸಾವಯವ ಕೃಷಿಯ ಬಗ್ಗೆ ವಿವರಿಸಿದರು. ಬದಲಾದ ಸನ್ನಿವೇಶದಲ್ಲಿ ಆಹಾರ ಪದಾರ್ಥಗಳು ಮೂಲಸತ್ವ ಕಳೆದುಕೊಂಡು ರಸಾಯನಿಕಗಳ ಮೂಲಕ ಉತ್ಪಾದನೆ ಹೆಚ್ಚಿಸಿಕೊಳ್ಳುತ್ತಿರುವುದರಿಂದ ಉಂಟಾಗುವ ಅಪಾಯವನ್ನು ತಿಳಿಸಿದರು.
ಸಾವಯವ ಕೃಷಿಗೆ ಅಗತ್ಯವಿರುವ ಗೋವು, ಕೃಷಿಯಲ್ಲಿ ರೈತನ ಶ್ರಮದಾಯಕ ಬದುಕು ಎಲ್ಲವನ್ನು ಮಕ್ಕಳಿಗೆ ಮನಮುಟ್ಟುವಂತೆ ವಿವರಿಸಿದರು. ಮಕ್ಕಳಿಗೆ ಕೃಷಿಯ ಪ್ರಾಯೋಗಿಕ ಕಲಿಕೆಯೊಂದಿಗೆ ಹಲವು ವಿಚಾರಗಳು ಪರಿಣಾಮಕಾರಿಯಾಗಿ ತಲುಪಿದ್ದರಿಂದ ಆಯೋಜಕರ ಶ್ರಮವೂ ಸಾರ್ಥಕವೆನಿಸಿತು.
ಪ್ರತಿಷ್ಠಾನದ ಪ್ರಮುಖರಾದ ಅರುಣ ಕುಮಾರ್, ಪ್ರಜ್ಞಾಭಾರತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಲೋಹಿತಾಶ್ವ ಕೇದಿಗ್ಗೆರೆ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಅಂಬುಜಾ ಮುಂತಾದವರಿದ್ದರು.