ದೇಶ ಅಭಿವೃದ್ಧಿ ಹೊಂದಲು ಪ್ರತಿಯೊಬ್ಬರೂ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಂತರಾಗಿರಬೇಕು. ಈ ಉದ್ದೇಶದಿಂದ ಸರ್ಕಾರ ಶಾಲಾ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ 1ರಿಂದ 10ನೇ ತರಗತಿಯ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ವಿತರಿಸುವ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಬಾಲ್ಯದಲ್ಲಿ ನಮಗೆ ಮೂರು ಹೊತ್ತು ಊಟವೇ ಸಿಗುತ್ತಿರಲಿಲ್ಲ. ಬಡತನದ ದಿನಗಳಲ್ಲಿ ಮುದ್ದೆ ಜತೆಗೆ ಉಪ್ಪು ಮತ್ತು ಮೆಣಸಿನಕಾಯಿ ಸೇರಿಸಿ ಊಟ ಮಾಡುತ್ತಿದ್ದೆವು. ಆದರೆ ಪ್ರಸ್ತುತ ಯಾರೂ ಹಸಿವಿನಿಂದ ಬದುಕು ಸಾಗಿಸಬಾರದು. ಹಸಿವುಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ನಮ್ಮ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ ಎಂದು ಹೇಳಿದರು.
ವೈಜ್ಞಾನಿಕ ಮತ್ತು ವೈಚಾರಿಕತೆಯಿಂದ ಕೂಡಿದ ಶಿಕ್ಷಣ ಜಾರಿಗೆ ಬರಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದರು. ಅದರಂತೆ, ನಮ್ಮ ವಿದ್ಯಾರ್ಥಿಗಳು ಹಾಗೂ ಯುವಸಮೂಹ ಯಾವುದೇ ಧರ್ಮ, ಜಾತಿ, ಮತದ ಗೊಂದಲಕ್ಕೆ ಒಳಗಾಗದೆ ಸಂವಿಧಾನದ ಆಶಯಗಳಿಗೆ ತಕ್ಕಂತೆ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಓದಿನ ಜತೆಗೆ ಬದುಕು ಕಟ್ಟಿಕೊಳ್ಳುವಂತಹ ಕೌಶಲ್ಯವನ್ನು ತಿಳಿಸಿಕೊಡಬೇಕು. ಎಲ್ಲ ವಿದ್ಯಾರ್ಥಿಗಳು ಭಾರತದ ಉತ್ತಮ ಪ್ರಜೆಗಳಾಗಿ ಸಂವಿಧಾನದ ಆಶಯಕ್ಕೆ ಹಾಗೂ ಸ್ವಾತಂತ್ರ್ಯದ ಉದ್ದೇಶಗಳಿಗೆ ಅನುಗುಣವಾಗಿ ನಿಮ್ಮ ಬದುಕನ್ನು ನೀವೇ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಮಕ್ಕಳು ಒಂದೇ ಪಂಕ್ತಿಯಲ್ಲಿ ಊಟ ಮಾಡುತ್ತಿದ್ದರೂ 9 ಮತ್ತು 10ನೇ ತರಗತಿ ಮಕ್ಕಳಿಗೆ ಮೊಟ್ಟೆ ಕೊಡುತ್ತಿರಲಿಲ್ಲ. ಈ ತಾರತಮ್ಯ ಹೋಗಲಾಡಿಸುವಂತೆ ಮನವಿಗೆ ಸ್ಪಂದಿಸಿದ್ದ ಸಿದ್ದರಾಮಯ್ಯ ಅವರು ಎಲ್ಲ ಮಕ್ಕಳಿಗೂ ಮೊಟ್ಟೆ, ಬಾಳೆಹಣ್ಣು ವಾರದಲ್ಲಿ 2 ದಿನ ವಿತರಿಸುವಂತೆ ಆದೇಶ ಮಾಡಿದ್ದಾರೆ. ಅಧಿಕಾರಿಗಳು ಮಕ್ಕಳಿಗೆ ಎಲ್ಲ ಸವಲತ್ತು ತಲುಪಿಸಬೇಕು ಎಂದರು.
ಶಾಸಕ ತನ್ವೀರ್‌ಸೇಠ್, ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಭಾರತಿ, ಉಪ ನಿರ್ದೇಶಕ ಪಾಂಡು, ಡಯಟ್ ಪ್ರಾಂಶುಪಾಲ ನಾಗರಾಜಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೃಷ್ಣ, ವೀರೇಶ್, ಮಹಾರಾಜ ಕಾಲೇಜು ಪ್ರೌಢಶಾಲೆ ಉಪ ಪ್ರಾಂಶುಪಾಲ ಮಹೇಶ್, ಮಹಾರಾಜ ಪಿಯು ಕಾಲೇಜು ಪ್ರಾಂಶುಪಾಲ ಉದಯಶಂಕರ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶ್ರೀಕಂಠಸ್ವಾಮಿ, ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಶಿಕ್ಷಣಾಧಿಕಾರಿ ರೇವಣ್ಣ ಇತರರಿದ್ದರು.
ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಕಾರ್ಯಕ್ರಮದಡಿ ಜಿಲ್ಲೆಯ 2228 ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 2,12,646 ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಪ್ರತಿ ವಿದ್ಯಾರ್ಥಿಗೆ 6 ರೂ. ನಿಗದಿಪಡಿಸಲಾಗಿದೆ. 80 ದಿನಗಳು ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ವಿತರಣೆಗೆ 10.20 ಕೋಟಿ ರೂ. ವೆಚ್ಚವಾಗಲಿದೆ. 2023-24ನೇ ಸಾಲಿನಲ್ಲಿ 166457 ಮಕ್ಕಳು ಮೊಟ್ಟೆ, 17518 ಮಕ್ಕಳು ಬಾಳೆಹಣ್ಣು, 12501 ಮಕ್ಕಳಿಗೆ ಶೆಂಗಾಚಿಕ್ಕಿ ವಿತರಿಸಲಾಗುತ್ತದೆ. ಈ ಮೊದಲು 1ರಿಂದ 8ನೇ ತರಗತಿ ಮಕ್ಕಳಿಗೆ ಮಾತ್ರ ಮೊಟ್ಟೆ, ಬಾಳೆ ಹಣ್ಣು ವಿತರಿಸಲಾಗುತ್ತಿತ್ತು. ಇದನ್ನು 10ನೇ ತರಗತಿಯವರೆಗೂ ವಿಸ್ತರಿಸಲಾಗಿದೆ.