ಬೈಂದೂರು: ಶಿಕ್ಷಣದೊಂದಿಗೆ ಸಂಸ್ಕಾರ ದೊರೆತಾಗ ಮಕ್ಕಳು ಸಮಾಜಕ್ಕೆ ಸತ್ಪ್ರಜೆಯಾಗಿ ಬೆಳೆಯಬಲ್ಲರು. ಈ ಕಾರಣಕ್ಕೆ ಮಕ್ಕಳಿಗೆ ಸಂಸ್ಕಾರದ ಶಿಕ್ಷಣ ಕಲಿಸಬೇಕಾದ ಜವಾಬ್ದಾರಿ ಎಲ್ಲದ್ದಾಗಿದೆ ಎಂದು ಉದ್ಯಮಿ ಉಪ್ಪುಂದ ಸದಾನಂದ ಪ್ರಭು ಹೇಳಿದರು.
ಯಳಜಿತ ಶ್ರೀ ರಾಮಕೃಷ್ಣ ಕುಟೀರದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಮಾತನಾಡಿ, ಎರಡೂವರೆ ದಶಕದಿಂದ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹಿಸುತ್ತಾ ಬರಲಾಗುತ್ತಿದೆ. ಕುಟೀರದ ಮೂಲಕ ಹಲವು ಸಾಮಾಜಿಕ, ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ದಾನಿಗಳ ನೆರವಿನಿಂದ ಸೇವಾ ಕಾರ್ಯದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿದೆ ಎಂದರು.
ನಿವೃತ್ತ ಬ್ಯಾಂಕ್ ಅಧಿಕಾರಿ ಉದಯ ಪ್ರಭು ಭಟ್ಕಳ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಿದರು. ಜ್ಯೋತಿ ಎಚ್.ಎಸ್. ವಂದಿಸಿದರು. ಚಂದ್ರ ಕೊಠಾರಿ ಎನ್. ಕಾರ್ಯಕ್ರಮ ನಿರೂಪಿಸಿದರು.