ಎನ್.ಆರ್.ಪುರ ತಾಲೂಕು ಕುದುರೆಗುಂಡಿ ತಲಮಕ್ಕಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮವನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು. ದೀಪ್ತಿ, ಚಂದ್ರಶೇಖರ್, ಕೆ.ಎನ್.ಗಣೇಶ್, ಹೇಮಂತ್‌ಕುಮಾರ್, ಕವಿತಾ, ಅಂಬಿಕಾ, ನುಗ್ಗಿ ಮಂಜುನಾಥ್, ಜ್ಯೋತಿ ಇತರರಿದ್ದರು. 
ಜಿಲ್ಲೆ

ಮಕ್ಕಳಿಗೆ ಮಾಹಿತಿ ತಂತ್ರಜ್ಞಾನ ಅವಶ್ಯ

ಎಸ್.ಎನ್.ರವೀಂದ್ರ

ಎನ್.ಆರ್.ಪುರ: ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಸೇರಿದಂತೆ ಮಾಹಿತಿ ತಂತ್ರಜ್ಞಾನ ಅವಶ್ಯಕವಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಶುಕ್ರವಾರ ಕುದುರೆಗುಂಡಿಯ ತಲಮಕ್ಕಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಂಗಮಂದಿರ ಸಭಾಂಗಣ, ಕಾಂಪೌಂಡ್, ಆಟದ ಮೈದಾನ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ಹಾಗೂ ಶಾರದಾ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಹಿಂದೆ ಮಕ್ಕಳು ಉನ್ನತ ಶಿಕ್ಷಣ ಪಡೆಯದಿದ್ದರೂ ಉತ್ತಮ ಜೀವನ ನಡೆಸುತ್ತಿದ್ದರು. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಶಿಕ್ಷಣ ಅತಿ ಅಗತ್ಯವಾಗಿದೆ. ನಾನು ಶಿಕ್ಷಣಕ್ಕೆ ಅತಿ ಹೆಚ್ಚು ಅನುದಾನ ನೀಡಿದ್ದು, ರಾಜ್ಯದ 12 ಶಾಸಕರ ಪಟ್ಟಿಯಲ್ಲಿ ಪೈಕಿ ನಾನೂ ಸೇರಿದ್ದೇನೆ. ಎಸ್.ಎಂ.ಕೃಷ್ಣ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹೆಚ್ಚು ವಸತಿ ಶಾಲೆ ಪ್ರಾರಂಭಿಸಿದ್ದರು. ಪ್ರಸ್ತುತ ರಾಜ್ಯ ಸರ್ಕಾರ ಶಿಕ್ಷಣಕ್ಕೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಮಕ್ಕಳು ದೇಶದ ಆಸ್ತಿಯಾಗಬೇಕು ಎಂದರು.
ನವೀಕರಿಸಬಹುದಾದ ಇಂಧನ ನಿಗಮದಿಂದ ಕೊಪ್ಪ ಡಿಗ್ರಿ ಕಾಲೇಜು ಒಳಾಂಗಣ ಕ್ರೀಡಾಂಗಣಕ್ಕೆ 1 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದೇನೆ. ಕೊಪ್ಪ ಡಯಾಲಿಸಿಸ್ ಕೇಂದ್ರಕ್ಕೆ 8 ಲಕ್ಷ, ಕೊಪ್ಪ ಪಿಸಿಎಆರ್‌ಡಿ ಬ್ಯಾಂಕ್‌ಗೆ 25 ಲಕ್ಷ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 3 ಕೋಟಿ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.
ಕೊಪ್ಪ ಬಿಇಒ ಜ್ಯೋತಿ ಮಾತನಾಡಿ, ಶಾಲೆಯ ಮಕ್ಕಳಿಗೆ ಭೌತಿಕ ಶಿಕ್ಷಣ ಹಾಗೂ ಶೈಕ್ಷಣಿಕ ಅಭಿವೃದ್ಧಿಯೂ ಮುಖ್ಯ. ಶಾಲೆ ಅಭಿವೃದ್ಧಿಗೆ ಶಿಕ್ಷಕರ ಜತೆಗೆ ಪಾಲಕರು, ಎಸ್‌ಡಿಎಂಸಿ, ಜನಪ್ರತಿನಿಧಿಗಳ ಸಹಕಾರವೂ ಮುಖ್ಯ. ಕುದುರೆಗುಂಡಿಯ ತಲಮಕ್ಕಿ ಸರ್ಕಾರಿ ಶಾಲೆಯ 8 ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಶಾಲೆಯಲ್ಲಿ 131 ಮಕ್ಕಳಿದ್ದು ಮುಂದೆ ದಾಖಲಾತಿ ಹೆಚ್ಚಿಸುವ ಗುರಿ ಹೊಂದಿದ್ದಾರೆ ಎಂದರು.
ಕುದುರೆಗುಂಡಿ ಸಮುದಾಯ ಆರೋಗ್ಯಾಧಿಕಾರಿ ಮುಕೇಶ್‌ಕುಮಾರ್, ವಾಟರ್‌ಮ್ಯಾನ್ ಸಾಧು, ದೈಹಿಕ ಶಿಕ್ಷಕ ಮೋಹನ್, ದಾನಿ ಸುನೀತ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ನವೀಕರಿಸಬಹುದಾದ ಇಂಧನ ನಿಗಮದಿಂದ ರಾಜ್ಯಾದ್ಯಂತ ರೈತರಿಗಾಗಿ ಶೇ.80 ಸಬ್ಸಿಡಿ ದರದಲ್ಲಿ ಸೋಲಾರ್ ಪಂಪ್‌ಸೆಟ್, ಸೋಲಾರ್ ಲೈಟ್ ನೀಡುವ ಚಿಂತನೆ ಮಾಡಿದ್ದೇನೆ. ಖಾಸಗಿಯವರ ಬರಡು ಭೂಮಿ ಇದ್ದರೆ ಅಲ್ಲಿ ಸೋಲಾರ್ ಯುನಿಟ್ ಅಳವಡಿಸುವ ಚಿಂತನೆ ಇದೆ. ಪಾವಗಡದಲ್ಲಿ 8,500 ಎಕರೆ ಜಾಗದಲ್ಲಿ ಸೋಲಾರ್ ಯುನಿಟ್ ಅಳವಡಿಸಿ ದಿನಕ್ಕೆ 2 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ಚಿಂತನೆ ನಡೆಸಿದ್ದೇನೆ ಎಂದು ನವೀಕರಿಸಬಹುದಾದ ಇಂಧನ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.
ಬಿಂತ್ರವಳ್ಳಿ ಗ್ರಾಪಂ ಅಧ್ಯಕ್ಷೆ ದೀಪ್ತಿ ಚಂದ್ರಶೇಖರ್, ಉಪಾಧ್ಯಕ್ಷ ಕೆ.ಎನ್.ಗಣೇಶ್, ಸದಸ್ಯರಾದ ಹೇಮಂತ್‌ಕುಮಾರ್, ಕವಿತಾ, ಅಂಬಿಕಾ, ಎಸ್‌ಡಿಎಂಸಿ ಅಧ್ಯಕ್ಷೆ ವಿದ್ಯಾ ದಿನೇಶ್, ಉಪಾಧ್ಯಕ್ಷ ಲಕ್ಷ್ಮಣ, ಸದಸ್ಯರಾದ ಚಂದ್ರಶೇಖರ, ಕುಸುಮಾ, ವಿಜೇಂದ್ರ, ಸವಿಕುಮಾರ್, ಮೋಹನ್, ಕುದುರೆಗುಂಡಿ ಕಾಫಿ ಬೆಳೆಗಾರ ದೀಪಕ್, ಕೊಪ್ಪ ಬಗರ್‌ಹುಕುಂ ಸಮಿತಿ ಸದಸ್ಯ ನುಗ್ಗಿ ಮಂಜುನಾಥ್, ಮುಖ್ಯಶಿಕ್ಷಕಿ ಲೀನಾ ಡಿ.ಕಾಸ್ಟಾ, ಕೊಪ್ಪ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಛಲವಾದಿ, ಶಿಕ್ಷಣ ಸಂಯೋಜಕ ರವೀಂದ್ರ, ಕೊಪ್ಪ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಸ ಅಧ್ಯಕ್ಷ ಮಂಜುನಾಥ್ ಇತರರಿದ್ದರು.