ಹನೂರು: ಶಿಕ್ಷಣದ ಜತೆ ಮಕ್ಕಳಿಗೆ ಸಂಸ್ಕಾರವನ್ನು ಕಲಿಸಬೇಕು ಎಂದು ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಹನೂರು ಪಟ್ಟಣದ ದರ್ಶ್ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ದರ್ಶ್ ಶಾಲೆ ಹನೂರು ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಸೇವೆ ನೀಡುತ್ತಿದೆ. ಮೊದಲು ಈ ಭಾಗದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳ ಕೊರತೆ ಇತ್ತು. ಆದರೀಗ ಹನೂರು ಭಾಗದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳು ಹೊರಹೊಮ್ಮುತ್ತಿವೆ ಎಂದರು.
ಸಂಸ್ಕಾರವಿಲ್ಲದಿದ್ದರೆ ಮಕ್ಕಳು ಎಷ್ಟೇ ಶಿಕ್ಷಣ ಪಡೆದರೂ ವ್ಯರ್ಥವಾಗುತ್ತದೆ. ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ಮೊದಲು ಸಂಸ್ಕಾರ ಕಲಿಸಬೇಕು. ವಿದ್ಯೆ ಜತೆ ಸಂಸ್ಕಾರ ಬೆರೆತರೆ ಸಾಧನೆ ಹಾದಿ ಸುಗಮವಾಗುತ್ತದೆ ಎಂದು ಹೇಳಿದರು.
ಬಿಇಒ ಶಿವರಾಜು ಮಾತನಾಡಿ, ಮಕ್ಕಳ ಅಭಿವೃದ್ಧಿಯಲ್ಲಿ ಶಿಕ್ಷಕರು ಹಾಗೂ ಪಾಲಕರು ಇಬ್ಬರ ಪಾತ್ರವೂ ಪ್ರಮುಖವಾಗಿರುತ್ತದೆ. ಮಕ್ಕಳ ಕಲಿಕೆಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ಹೇಳಿದರು.
ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಜಯಗಳಿಸಿದ ಮಕ್ಕಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. ಶಾಲೆಯ ಸಂಸ್ಥಾಪಕ ವೆಂಕಟರಮಣ ನಾಯ್ಡು, ಅಧ್ಯಕ್ಷ ಶ್ರೀನಿವಾಸ್ ನಾಯ್ಡು, ಚಂದನಾ, ಜಯಶ್ರೀ ಅಜಯ್ ಕುಮಾರ್, ಎಚ್.ಎಸ್.ನಾಗೇಶ್ವರ್, ಶ್ರೀನಿವಾಸ್ ನಾಯ್ಡು ಇತರರು ಇದ್ದರು.