ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿ ತನ್ನ ಅಂತರಂಗದಲ್ಲಿ ಸಾಕಷ್ಟು ಜ್ಞಾನ ಸಂಪಾದಿಸಿಕೊಂಡು ಮನಸ್ಸಿನಲ್ಲಿ ಬಹಳ ತಿಳಿದುಕೊಳ್ಳುತ್ತಾನೆ. ಆದರೆ ಆ ಜ್ಞಾನ ಬಹಿರಂಗದ ಕ್ರಿಯಾರೂಪದಲ್ಲಿ ಉಪಯೋಗವಾದರೆ ಆತನ ಸಾಧನೆ ಹಾದಿ ಸುಲಭವಾಗುತ್ತದೆ ಎಂದು ಶಿಶು ಶಿಕ್ಷಣ ತಜ್ಞೆ ಮೃಣಾಲ ಜೋಶಿ ಅಭಿಪ್ರಾಯಪಟ್ಟರು.
ನಗರದ ಚರಂತಿಮಠ ಗಾರ್ಡನ್ನ ಬನಶಂಕರಿ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ತನ್ನ ವಿದ್ಯಾಭ್ಯಾಸದತ್ತ ಗಮನ ನೀಡಿದರೆ ಮನಸ್ಸು ಕಲ್ಮಷಗೊಳ್ಳುವುದಿಲ್ಲ. ವಿದ್ಯಾರ್ಥಿಯಲ್ಲಿ ಕ್ರಿಯಾ ಮತ್ತು ಜ್ಞಾನಗಳ ಸಮನ್ವಯವಾದರೆ ಸಾಧನೆ ಸಾಧ್ಯ. ದೇಶದ ಯುವ ಶಕ್ತಿಯಲ್ಲಿರುವ ಮನಸ್ಸು ಹಾಗೂ ಶರೀರ ಶುದ್ಧೀಕರಣಗೊಂಡರೆ ದೇಶ ಬಲಿಷ್ಟಗೊಳ್ಳಲಿದೆ. ಆದರೆ ಯುವ ಜನತೆ ದುಶ್ಚಟಕ್ಕೆ ಬಲಿಯಾಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದು ಖೇದಕರ ಸಂಗತಿ. ನಾವು ಇದನ್ನು ತಡೆಗಟ್ಟಬೇಕು ಎಂದರು.
ಪಿಎಸ್ಐ ಸ್ವಾತಿ ಮುರಾರಿ ಮಾತನಾಡಿ, ಟಿವಿ, ಮೋಬೈಲ್, ಅಂತರ್ಜಾಲ ಬಳಕೆಯನ್ನು ರ್ದುಬಳಕೆ ಮಾಡಿಕೊಳ್ಳುವ ಮನಸ್ಸುಗಳಿಂದ ವಿಕೃತ ಕೃತ್ಯಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಮೌಲ್ಯಯುತ ಸಂಸ್ಕಾರ, ಶಿಕ್ಷಣ ನೀಡುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ ಮಾತನಾಡಿದರು. ಶ್ರೀ ಧರ್ಮಶಾಸ್ತ್ರ ಸೇವಾ ಸಮಿತಿಯ ರಮೇಶ ಪಾತ್ರೋಟ ಸಾನ್ನಿಧ್ಯ ವಹಿಸಿದ್ದರು. ಬನಶಂಕರಿ ಭವನ ಅಧ್ಯಕ್ಷ ಶಿವಾನಂದ ಲೋಲೆನವರ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪಾಸಾದ ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಆಫ್ ಸೆವೆನ ಹಿಲ್ಸ್ ಅಧ್ಯಕ್ಷೆ ಗೌರಿ ಮದಲಬಾವಿ, ಬಸವಂತ ತೋಟದ, ಬಸವರಾಜ ಸೂರಗೊಂಡ, ಇತರರು ಇದ್ದರು. ರಾಘವೇಂದ್ರ ಸ್ವಾಗತಿಸಿದರು. ಅಶೋಕ ನಾಗಸಮುದ್ರ ನಿರೂಪಿಸಿದರು. ಸುನಿತಾ ವಂದಿಸಿದರು.