ವಿಜಯಪುರ: ಕರೊನಾ ಹಿನ್ನೆಲೆಯಲ್ಲಿ ಶಾಲೆಗಳು ಬಂದ್ ಆಗಿರುವುದರಿಂದ ಸರ್ಕಾರಿ ಶಾಲೆಗಳ ಶೇ.50 ಮಕ್ಕಳು ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ.
ಭವಿಷ್ಯದ ದೃಷ್ಟಿಯಿಂದ ಕೆಲಸ ಕಲಿತುಕೊಳ್ಳುವುದು ತಪ್ಪಲ್ಲವಾದರೂ ಪರಿಸ್ಥಿತಿ ಹೀಗೆ ಮುಂದುವರಿದರೆ ಶಾಲೆ ಆರಂಭವಾದರೂ ಅಂಥ ಮಕ್ಕಳು ಶಾಲೆಗೆ ಮರಳಿ ಬರುವರೇ ಎಂಬ ಅನುಮಾನ ಕಾಡತೊಡಗಿದೆ. ಖಾಸಗಿ ಶಾಲೆಗಳಲ್ಲಿ ಆನ್‌ಲೈನ್ ಶಿಕ್ಷಣ ದೊರೆಯುತ್ತಿದೆ, ಆದರೆ ಸರ್ಕಾರಿ ಶಾಲೆಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಹೋಟೆಲ್, ಅಂಗಡಿ, ಗ್ಯಾರೇಜ್, ಬಾರ್, ಕಟ್ಟಡ, ಕ್ವಾರಿ ಹಾಗೂ ತೋಟಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಕೂಲಿ ಕಾರ್ಮಿಕರ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯಲು ಮುಂದಾಗಿದ್ದಾರೆ. ಮನೆಯಲ್ಲಿ ಮಕ್ಕಳು ಒಬ್ಬರೇ ಇರುವುದರಿಂದ ಅನಿವಾರ್ಯವಾಗಿ ಕಾರ್ಮಿಕರು ಕೆಲಸದ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಈ ವೇಳೆ ಮಕ್ಕಳೂ ಸಣ್ಣ-ಪುಟ್ಟ ಕೆಲಸ ಮಾಡುತ್ತಿದ್ದಾರೆ. ಇಂತಹ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
ಕೆಲಸ ಕಲಿಯಲು ಬಿಡುತ್ತಿದ್ದಾರೆ: ಗ್ಯಾರೇಜ್‌ಗಳಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಅಧಿಕವಾಗಿದೆ. ಕೆಲ ಪಾಲಕರು ಶಾಲೆ ಆರಂಭವಾಗದ ಹಿನ್ನೆಲೆಯಲ್ಲಿ ಮಕ್ಕಳು ಮನೆಯಲ್ಲೇ ಇರುವ ಬದಲು ಕೆಲಸವನ್ನಾದರೂ ಕಲಿಯಲಿ ಎಂದು ಗ್ಯಾರೇಜ್‌ಗೆ ಸೇರಿಸುತ್ತಿದ್ದಾರೆ. ಸಂಬಳ ಕೊಡುವುದು ಬೇಡ, ಕೆಲಸ ಕಲಿಸಿ ಎಂದು ಹೇಳುವವರ ಸಂಖ್ಯೆ ಹೆಚ್ಚಿದೆ. ಶಾಲೆ ಇಲ್ಲದ ಹಿನ್ನೆಲೆಯಲ್ಲಿ ಮಕ್ಕಳು ಮನೆಯಲ್ಲಿ ಹಣ ಕದಿಯುವುದು, ಕೆಟ್ಟವರ ಸಹವಾಸ ಮಾಡುವ ಸಾಧ್ಯತೆ ಇರುವುದೂ ಪಾಲಕರ ಈ ನಿರ್ಧಾರಕ್ಕೆ ಕಾರಣ.
ನಾವು ಯಾರೂ ಮನೆಯಲ್ಲಿ ಇರದ ಹಿನ್ನೆಲೆಯಲ್ಲಿ ಮಕ್ಕಳನ್ನೂ ಕೆಲಸಕ್ಕೆ ಕಳುಹಿಸುತ್ತಿದ್ದೇವೆ. ಮನೆಯಲ್ಲಿ ಒಬ್ಬರೇ ಇದ್ದರೆ ಸಮಸ್ಯೆ. ಮಂಜುಳಮ್ಮ, ಕೂಲಿ ಕಾರ್ಮಿಕರು, ವಿಜಯಪುರ ಗ್ಯಾರೇಜ್‌ಗಳಿಗೆ ಕೆಲಸ ಕಲಿಯಲು ಪಾಲಕರೇ ಮಕ್ಕಳನ್ನು ಕರೆ ತಂದು ಬಿಡಲು ಮುಂದಾಗಿದ್ದಾರೆ. ಆದರೆ ಬಾಲ ಕಾರ್ಮಿಕ ಕಾಯ್ದೆ ಹಿನ್ನೆಲೆಯಲ್ಲಿ ಅಪ್ರಾಪ್ತ ಮಕ್ಕಳನ್ನು ದುಡಿಸುವುದು ಕಷ್ಟ ಎಂದು ನಾವು ಅದನ್ನು ನಿರಾಕರಿಸುತ್ತಿದ್ದೇವೆ. ಇಮ್ರಾನ್ ಪಾಷಾ, ಆಟೋ ಗ್ಯಾರೇಜ್ ಮಾಲೀಕ ಕೂಲಿ ಮಾಡಿ ಒಮ್ಮೆ ಹಣ ಪಡೆದ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆತರುವುದು ಕಷ್ಟ. ಹೀಗಾಗಿ ಸರ್ಕಾರ ಇಂತಹ ಮಕ್ಕಳಿಗೆ ಪಾಠ ಹೇಳಿಕೊಡುವ ವ್ಯವಸ್ಥೆ ಕಲ್ಪಿಸಬೇಕು. ಬಸವರಾಜು, ಶಿಕ್ಷಕ, ವಿಜಯಪುರ ಜಿಲ್ಲೆಯಾದ್ಯಂತ ಶಿಕ್ಷಣ ಇಲಾಖೆ, ಮಕ್ಕಳ ಸಹಾಯವಾಣಿ, ಜಿಲ್ಲಾಡಳಿತ ಸಹಯೋಗದಲ್ಲಿ ವಿಜಯಪುರ, ಬೂದಿಗೆರೆ, ಆವತಿ ಸೇರಿ ಬಹಳಷ್ಟು ಕಡೆ ಬಾಲಕಾರ್ಮಿಕರನ್ನು ನೇಮಿಸಿಕೊಳ್ಳುವುದರ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಇದರ ನಡುವೆಯೂ ಬಹಳಷ್ಟು ಕಡೆ ಕೂಲಿಗಳಿಗೆ ಹೋಗುವ ಪಾಲಕರು ಮಕ್ಕಳನ್ನು ಒಂಟಿಯಾಗಿ ಬಿಡಲು ಇಚ್ಛಿಸದೆ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿರುವ ಪ್ರಕರಣಗಳು ಕಂಡು ಬಂದಿವೆ. ಅಲ್ಲಿಯೂ ಸಾಕಷ್ಟು ಎಚ್ಚರಿಕೆ ನೀಡಲಾಗುತ್ತಿದೆ. ಶಾಲಾ-ಕಾಲೇಜುಗಳು ಪ್ರಾರಂಭವಾದಾಗ ಮಾತ್ರ ಬಾಲಕಾರ್ಮಿಕ ಸಮಸ್ಯೆಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯ. ಅಂಬಿಕಾ, ಕಾರ್ಮಿಕ ಇಲಾಖೆ ನಿರೀಕ್ಷಕಿ