ಕೆ.ಆರ್.ನಗರ: ಟಿಪ್ಪರ್ ಲಾರಿ ಮತ್ತು ಶಾಲಾ ವಾಹನ ನಡುವೆ ಶನಿವಾರ ಮುಂಜಾನೆ ಅಪಘಾತ ಸಂಘವಿಸಿ ಶಾಲಾ ವಾಹನದಲ್ಲಿದ್ದ 15 ಮಕ್ಕಳ ಪೈಕಿ 7 ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಭೇರ್ಯ ಸಮೀಪ ಮಿರ್ಲೆ ಗ್ರಾಮದ ಸಿಇಟಿ ಮಕ್ಕಳಿದ್ದ ಶಾಲಾ(ಮಿನಿ ಬಸ್) ವಾಹನಕ್ಕೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಿನಿ ಬಸ್ ಉರುಳಿ ಬಿದ್ದಿದ್ದು ಶಾಲಾ ವಾಹನದಲ್ಲಿದ್ದ ಸುಮಾರು 15 ವಿದ್ಯಾರ್ಥಿಗಳಲ್ಲಿ 7 ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ತಕ್ಷಣ ಸಾಲಿಗ್ರಾಮ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ವಲ್ಪ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಮಕ್ಕಳಿಗೆ ಕೆ.ಆರ್.ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶಾಸಕ ಭೇಟಿ: ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಡಿ.ರವಿಶಂಕರ್ ಶಾಲಾ ಮಕ್ಕಳ ಆರೋಗ್ಯವನ್ನು ವಿಚಾರಿಸಿದರು. ಅಪಘಾತ ಎಸಗಿದ ವಾಹನ ಹಾಗೂ ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೋಲೀಸ್ ಇಲಾಖೆ ಅಕಾರಿಗಳಿಗೆ ಸೂಚಿಸಿದರು. ಅಲ್ಲದೆ ಸ್ಥಳದಲ್ಲಿಯೇ ಮಕ್ಕಳಿಗೆ ಧನಸಹಾಯ ಮಾಡಿದರು.
ಟಿಎಚ್‌ಒ ಡಾ.ಡಿ.ನಟರಾಜ್, ಆಸ್ಪತ್ರೆ ಆಡಳಿತ ವೈದ್ಯಾಕಾರಿ ಡಾ.ನವೀನ್‌ಕುಮಾರ್, ಬಿಇಒ ಆರ್.ಕೃಷ್ಣಪ್ಪ, ಇಸಿಒ ದಾಸಪ್ಪ ಇನ್ನಿತರರು ಹಾಜರಿದ್ದರು.