ಜಿಲ್ಲೆ

ಶಾಲಾವರಣದಲ್ಲಿ ಮಕ್ಕಳ ಕಲರವ, ನೆಲಮಂಗಲದಲ್ಲಿ ಮೊದಲ ದಿನ ಶೇ.50 ಹಾಜರಾತಿ, ಸೋಮವಾರದಿಂದ ಮಕ್ಕಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ

Bengaluru Rural

ನೆಲಮಂಗಲ: ನೂತನ ವರ್ಷಾರಂಭದ ದಿನದಂದೇ ರಾಜ್ಯದೆಲ್ಲೆಡೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ತರಗತಿ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದ್ದ ಹಿನ್ನೆಲೆಯಲ್ಲಿ ನಗರ ಮತ್ತು ತಾಲೂಕಿನಾದ್ಯಂತ ಶಾಲೆ ಮತ್ತು ಕಾಲೇಜುಗಳು ಪುನರಾರಂಭಗೊಂಡವು.

ಗುರುವಾರದಂದೇ ಶಾಲಾ ಆವರಣ, ತರಗತಿಗಳು, ಪ್ರಯೋಗಾಲಯ, ಶೌಚಗೃಹ, ಅಡುಗೆ ಕೋಣೆ ಸೇರಿ ಪೀಠೋಪಕರಣಗಳಿಗೆ ಸ್ಯಾನಿಟೈಸರ್ ಸಿಂಪಡಿಸಲಾಗಿತ್ತು. ಸದ್ಯಕ್ಕೆ ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭ ಮಾಡಲಾಗಿದ್ದು, ಬಹುತೇಕ ಕಾಲೇಜುಗಳಲ್ಲಿ ಹಾಜರಾತಿ ಪ್ರಮಾಣ ಶೇ.50 ಇತ್ತು. ಸೋಮವಾರದ ಬಳಿಕ ಹಾಜರಾತಿ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ. ಸಂಕ್ರಾತಿ ಬಳಿಕ ಪ್ರಥಮ ಪಿಯುಸಿ ತರಗತಿಗಳನ್ನು ಆರಂಭಿಸಲು ಕಾಲೇಜುಗಳು ಚಿಂತನೆ ನಡೆಸಿವೆ ಎನ್ನಲಾಗಿದೆ.

ಶುಕ್ರವಾರ ಶಾಲೆಗಳಿಗೆ ಬಂದ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. ತರಗತಿಗಳ ಕೊಠಡಿಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಲು ಮೊದಲೇ ಚೌಕ ನಿರ್ಮಿಸುವ ಮೂಲಕ ನಿಯಮ ಪಾಲನೆಗೆ ಆದ್ಯತೆ ನೀಡಲಾಯಿತು.

ಶೈಕ್ಷಣಿಕ ವರ್ಷದ ಆರಂಭದಿಂದ ಮೆನೆಗಳಲ್ಲಿನ ಆನ್‌ಲೈನ್ ಪಾಠ ಕೇಳಿ ಮಂಕಾಗಿದ್ದ ವಿದ್ಯಾರ್ಥಿಗಳಿಗೆ ಕೊನೆಗೂ ಗೃಹಬಂಧನದಿಂದ ಮುಕ್ತಿ ದೊರೆತು, ತರಗತಿಯಲ್ಲಿ ಕುಳಿತು ಪಾಠ ಕೇಳುವ ಅವಕಾಶ ಸಿಕ್ಕಿತು. ಇದು ವಿದ್ಯಾರ್ಥಿಗಳ ಸಂತಸಕ್ಕೆ ಕಾರಣವಾಯಿತು.

ಶುಭ ಕೋರಿದ ಶಿಕ್ಷಕರು: ಶಾಲಾ ಕಾಲೇಜು ಆರಂಭದ ಹಿನ್ನೆಲೆಯಲ್ಲಿ ಶಾಲೆ ಮತ್ತು ಕಾಲೇಜುಗಳನ್ನು ತೋರಣ ಹಾಗೂ ಬಣ್ಣಬಣ್ಣದ ರಂಗೋಲಿಗಳಿಂದ ಸಿಂಗರಿಸಲಾಗಿತ್ತು. ತಾಲೂಕಿನ ಬಹುತೇಕ ಸರ್ಕಾರಿ, ಖಾಸಗಿ ಶಾಲೆಗಳು ವಿದ್ಯಾರ್ಥಿಗಳನ್ನು ಸಂತೋಷದಿಂದ ಸ್ವಾಗತಿಸಿದವು. ಹೊಸ ವರ್ಷದ ಶುಭಾಷಯ ಕೋರಿದ ಶಿಕ್ಷಕರು ಸಂಭ್ರಮದಿಂದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ವಿದ್ಯಾರ್ಥಿಗಳಿಗೆ ತಿಳಿವಳಿಕೆ: ತರಗತಿಗಳಿಗೆ ಬಂದ ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ದೈಹಿಕ ಅಂತರ ಪಾಲನೆ ಕುರಿತಾಗಿ ವಿದ್ಯಾರ್ಥಿಗಳಿಗೆ ತಿಳಿವಳಿಕೆ ಮೂಡಿಸಿದರು. ಬಳಿಕ ಬೋಧನೆ ಆರಂಭಿಸಲಾಯಿತು.

ಶಾಲೆಗಳಲ್ಲಿ ಹಾಜರಾತಿ ಉತ್ತಮ: ನಗರ ಮತ್ತು ತಾಲೂಕಿನಾದ್ಯಂತ 11 ಸರ್ಕಾರಿ, 19 ಅನುದಾನಿತ 20 ಖಾಸಗಿ ಶಾಲೆಗಳು ಸೇರಿ ಒಟ್ಟು 55 ಪ್ರೌಢಶಾಲೆಗಳಿವೆ. 3,141 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪೈಕಿ ಶೇ.80 ವಿದ್ಯಾರ್ಥಿಗಳು ಶಾಲೆಗಳಿಗೆ ಹಾಜರಾಗಿದ್ದರು. ಗೈರಾಗಿರುವ ಮಕ್ಕಳ ಪಾಲಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಶಿಕ್ಷಕರು ಮಕ್ಕಳನ್ನು ಶಾಲೆಗೆ ಕಳಿಸುವಂತೆ ಮನವೊಲಿಸಲು ಪ್ರಯತ್ನಿಸಿದರು ಎಂದು ಕ್ಷೇತ್ರ ಸಮನ್ವಯಾಧಿಕಾರಿ ನರಸಿಂಹಯ್ಯ ಮಾಹಿತಿ ನೀಡಿದರು.

ವಿದ್ಯಾಗಮಕ್ಕೂ ಸ್ಪಂದನೆ: 6ರಿಂದ 9ನೇ ತರಗತಿವರೆಗಿನ ಮಕ್ಕಳಿಗೆ ಶಾಲಾ ಆವರಣದಲ್ಲಿ ವಿದ್ಯಾಗಮ ತರಗತಿಗಳು ಆರಂಭಗೊಂಡವು. ನಗರಕ್ಕಿಂತ ಗ್ರಾಮಾಂತರ ಪ್ರದೇಶದಲ್ಲಿ ಇದಕ್ಕೆ ಒಳ್ಳೆಯ ಸ್ಪಂದನೆ ದೊರೆತಿದೆ. ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ 3,845 ಮಕ್ಕಳ ಪೈಕಿ 1,247 ಮಕ್ಕಳು ವಿದ್ಯಾಗಮಕ್ಕೆ ಹಾಜರಾಗಿದ್ದರು.

ಪಾಳಿಯಂತೆ ಪಾಠಬೋಧನೆ: 6 ಮತ್ತು 7ನೇ ತರಗತಿಗಳಿಗೆ ವಾರದಲ್ಲಿ 2 ದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 12.30ರವರೆಗೆ (ಮಂಗಳವಾರ ಬುಧವಾರ) ಪಾಠ ನಡೆದರೆ 8 ಮತ್ತು 9ನೇ ತರಗತಿ ಮಕ್ಕಳಿಗೆ ವಾರದ 6 ದಿನ ಮಧ್ಯಾಹ್ನ 2ರಿಂದ ಸಂಜೆ 4.30ರವರೆಗೆ ಪಾಠ ನಡೆಯಲಿದೆ.